ಸುಳ್ಯ, ಮಾ 29(SM): ವಾರದ ಹಿಂದೆ ಮಡಿಕೇರಿಯ ಮೇಕೇರಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಬಿಜೆಪಿ ಮುಖಂಡ ಕಳಗಿ ಬಾಲಚಂದ್ರ ಸಾವಿಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಬಾಲಚಂದ್ರ ಅವರ ಸಾವಿಗೆ ಕಾರಣವಾದ ಅಪಘಾತ ಸಹಜವಾದುದಲ್ಲ ಎನ್ನಲಾಗಿದೆ. ಬದಲಿಗೆ ಅವರನ್ನು ಹತ್ಯೆ ಮಾಡಲೆಂದೇ ಅಪಘಾತ ನಡೆಸಲಾಗಿದೆ ಎನ್ನುವ ಮಾಹಿತಿ ಇದೀಗ ಪೊಲೀಸರ ತನಿಖೆಯಿಂದ ಲಭ್ಯವಾಗಿದೆ.
ಬಂಧಿತರನ್ನು ಸಂಪತ್ ಕುಮಾರ್(34), ಹರಿಪ್ರಸಾದ್(36) ಮತ್ತು ಜಯ(34) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಮಾರ್ಚ್ 29ರ ಶುಕ್ರವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಕೊಡಗು ಎಸ್ಪಿ ಸುಮನ್ ಡಿ.ಪಿ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಬಾಲಚಂದ್ರ ಅವರು ವಿರೋಧಿಸುತ್ತಿದ್ದರು. ಅಲ್ಲದೆ, ಅವುಗಳಿಗೆ ತಡೆಯೊಡ್ಡುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣದಿಂದಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಈ ಹಿಂದೆ ಬಿಜೆಪಿ ಕೂಡ ದೂರಿತ್ತು. ಇನ್ನು ಘಟನೆ ನಡೆದಿರುವ ಪ್ರದೇಶದಲ್ಲಿ ಬಾಲಚಂದ್ರ ಅವರು ಓಡಾಡುತ್ತಿದ್ದ ಪ್ರದೇಶವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
ಮಾರ್ಚ್ 19ರಂದು ಸಂಜೆ ವೇಳೆ ಘಟನೆ ನಡೆದಿತ್ತು. ಮಡಿಕೇರಿಯಲ್ಲಿ ಪಕ್ಷದ ತುರ್ತು ಸಭೆಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಓಮ್ನಿ ಕಾರು ಹಾಗೂ ಲಾರಿ ನಡುವೆ ಅಪಘಾತ ನಡೆದಿತ್ತು. ಈ ವೇಳೆ ಅವರು ಮೃತಪಟ್ಟಿದ್ದರು.