ಪುತ್ತೂರು, ಮೇ 18 (DaijiworldNews/SM): ಬ್ಯಾನರ್ ವಿವಾದದ ಬಳಿಕ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ಮಾಡಿದರು. ಮುಂದಿನ 5 ವರ್ಷಗಳಲ್ಲಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯದ ಸ್ಯಾಂಪಲ್ ಇದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು. ಹಾಗಿರುವಾಗ ಕಾನೂನು ಕಾಪಾಡುವವರೇ ಹಿಂದೂ ಕಾರ್ಯಕರ್ತರ ಮೇಲೆ ಈ ರೀತಿ ದೌರ್ಜನ್ಯ ಎಸಗಿದ್ದೇಗೆ ಎಂದು ಅವರು ಪ್ರಶ್ನಿಸಿದರು. ಕಾರ್ಯಕರ್ತರ ಮೇಲೆ ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹೊಡೆದಿದ್ದಾರೆ. ಕಾರ್ಯಕರ್ತರನ್ನು ಪ್ರಾಣಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಇಬ್ಬರು ಪೋಲೀಸರನ್ನು ಅಮಾನತು ಮಾಡಿದ್ದಾರೆ. ಘಟನೆಗೆ ಮೂಲ ಕಾರಣವಾದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪೋಲೀಸರು ನಮಗೆ ಒತ್ತಡ ಇತ್ತು ಎನ್ನುತ್ತಾರೆ, ಯಾರ ಒತ್ತಡ ಇದೆ ಅನ್ನೋದನ್ನ ಹೇಳಲಿ. ಬೇರೆ ಯಾರು ಒತ್ತಡ ಮಾಡಬೇಕು, ಕಾಂಗ್ರೇಸ್ ಸರಕಾರವೇ ಒತ್ತಡ ಹಾಕಬೇಕು. ಬಿಜೆಪಿಯವರು ಪೋಲೀಸರ ಮೇಲೆ ಒತ್ತಡ ಹಾಕ್ಲಿಕ್ಕೆ ಆಗುತ್ತಾ? ಸಣ್ಣಪುಟ್ಟ ವ್ಯತ್ಯಾಸ ಆಗಿದೆ, ಆದರೆ ಇದಕ್ಕೆ ಇಷ್ಟು ದೊಡ್ಡ ಶಿಕ್ಷೆಯ ಅಗತ್ಯವಿಲ್ಲ. ಪೊಲೀಸರು ಹೀಗೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾದೀತು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಎಚ್ಚರಿಸಿದರು.