ಮಂಗಳೂರು ನ 06: ತೊಕ್ಕೊಟ್ಟು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಹಿನ್ನೆಲೆಯಲ್ಲಿ ತುರ್ತು ಸಭೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಡೆಯಿತು. ಈ ವೇಳೆ ಸಂಚಾರಿ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಂಡ ನವಯುಗ ಕಂಪೆನಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು...ಈ ವೇಳೆ ನಂತೂರುನಿಂದ ತಲಪಾಡಿವರೆಗೆ ಕಾಮಗಾರಿ ಜವಾಬ್ದಾರಿ ವಹಿಸಿಕೊಂಡ ನವಯುಗ ಕಂಪೆನಿ ಇಂಜಿನಿಯರ್ ಹರೀಶ್ ಮಾತನಾಡಿ, 2010 ರಿಂದ ಫ್ಲೈಓವರ್ ಕಾಮಗಾರಿ ಆರಂಭಿಸಲಾಗಿದೆ. ಆರಂಭದಲ್ಲಿ ಭೂಸ್ವಾಧೀನ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿಯಲ್ಲೂ ಹಿನ್ನೆಡೆಯಾಯಿತು. ತದನಂತರ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಫ್ಲೈಓವರ್ ಡಿಸೈನ್ ಬದಲಾವಣೆ ನಡೆಸಲಾಗಿತ್ತು. ಇದರಿಂದ ನೂತನ ಡಿಸೈನ್ ಮತ್ತು ಪ್ಲಾನಿಂಗ್ ಕಂಪೆನಿ ಕೈಸೇರಲು ವರ್ಷ ಕಳೆಯಿತು ಎಂದು ಪ್ರತಿಕ್ರಿಯಿಸಿದ್ರು. ಬಳಿಕ ಸಾಮಾಜಿಕ ಕಾರ್ಯಕರ್ತ ರಾಝಿಕ್ ಉಳ್ಳಾಲ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀರಾ ನಿರ್ಲಕ್ಷ್ಯದಿಂದ ನಡೆಯುತ್ತಿದೆ. ಕಲ್ಲಾಪು ಖಾಸಗಿ ಸಭಾಂಗಣದ ಎದುರುಗಡೆ ಡಿವೈಡರ್ ಏರಿ ಹಲವು ವಾಹನಗಳು ಅಪಘಾತಕ್ಕೀಡಾಗುತ್ತಿದೆ. ತೊಕ್ಕೊಟ್ಟು ಜಂಕ್ಷನ್ನಿನ ಅವ್ಯವಸ್ಥೆಯನ್ನು ಇಂದು ಸಂಜೆಯೊಳಗೆ ದುರಸ್ತಿಗೊಳಿಸದೇ ಇದ್ದಲ್ಲಿ ಟೋಲ್ ಎದುರು ಕುಳಿತು ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.