ಪುತ್ತೂರು, ಮೇ 17 (DaijiworldNews/MS): ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅವರ ಪೋಟೋ ಬಳಸಿ ಭಾವಪೂರ್ಣ ಶ್ರದ್ಧಾಂಜಲಿ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 9 ಮಂದಿ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳನ್ನು ಠಾಣೆಯಲ್ಲಿ ಕೂಡಿ ಹಾಕಿ ತೀವ್ರವಾಗಿ ಥಳಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕರ ಹಾಗೂ ಕೆಲವು ಪ್ರಭಾವಿಗಳ ಒತ್ತಡಕ್ಕೊಳಗಾಗಿ ಪೊಲೀಸರು ಆರೋಪಿಗಳಿಗೆ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿ ಹಾಗೂ ನಗರಸಭೆ ನೀಡಿದ ದೂರಿನ್ವಯ ನರಿಮೊಗರು ಗ್ರಾಮದ ನಿವಾಸಿಗಳಾಗಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು. ಪೊಲೀಸರ ಕಿರುಕುಳ ತಿಳಿದು ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಡಿಸಿದ್ದಾರೆ ಎನ್ನಲಾಗಿದೆ.
ಥಳಿತದಿಂದ ಗಾಯಗೊಂಡ ಯುವಕರ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಚೇರಿಯಿಂದ ನಡೆದಾಡಲೂ ಕಷ್ಟ ಪಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಂಧಿತರು ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು , ಈ ಪೈಕಿ ಕೆಲವರು ಬಂಧಿತರು ಹಿಂದೂ ಸಂಘಟನೆಯ ಕಾರ್ಯಕರ್ತ ಎನ್ನಲಾಗಿದೆ. ಫೋಟೊದಲ್ಲಿ ಕಾಲು, ಬೆನ್ನು ಸೊಂಟದ ಹಿಂಭಾಗದಲ್ಲಿ ಥಳಿಸಿರುವುದು ಕಾಣುತ್ತಿದೆ.