ಉಡುಪಿ, ಮೇ 17 (DaijiworldNews/MS): ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿ ಮುಂದಿನ ಮಳೆಗಾಲ ಪ್ರಾರಂಭವಾಗುವವರೆಗೆ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.
ಉಡುಪಿ ನಗರ ಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈಗಾಗಲೇ ತಿಳಿಸಿರುವಂತೆ ನೀರು ಪೂರೈಕೆ ರೇಶನಿಂಗ್ ಮೂಲಕ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರತಿ ವಾರ್ಡಿನ ಬೇಡಿಕೆಯಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೀರು ಪೂರೈಕೆಯ ಬಗ್ಗೆ ವಾರ್ಡಿನ ನಗರ ಸಭಾ ಸದಸ್ಯರಿಗೆ ಮಾಹಿತಿ ನೀಡಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಹೇಳಿದರು.ಮುಂದಿನ ವಾರ ಮಳೆಗಾಲ ಪೂರ್ವ ಸಿದ್ಧತೆಯಾಗಿ ಚರಂಡಿ ಹೂಳೆತ್ತುವುದು, ಟಾಸ್ಕ್ ಫೋರ್ಸ್ ಹಾಗೂ ಇತರ ತುರ್ತು ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.
ಸಭೆಯಲ್ಲಿ ನಿಕಟ ಪೂರ್ವ ನಗರ ಸಭಾ ಅಧ್ಯಕ್ಷರಾದ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ, ಪೌರಾಯುಕ್ತರಾದ ರಮೇಶ್ ನಾಯ್ಕ್, ನಗರ ಸಭಾ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು