ಮಂಗಳೂರು, ಮೇ 17 (DaijiworldNews/MS): ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ಮಂಗಳವಾರ ಸಂಘದ ಸಭಾಂಗಣದಲ್ಲಿ ನಡೆದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬಂದರು ಆಡಳಿತಾಧಿಕಾರಿ ಬಿ. ಮಾಧವ ಕಾರಂತ್ ಮಾತನಾಡಿ, ಕುಟುಂಬ ಆರ್ಥಿಕವಾಗಿ ಹಿಂದುಳಿದರೆ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ, ಇಂತಹ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಕಲಿಕಾ ವ್ಯವಸ್ಥೆಯ ಸೇವೆ ನೀಡಲು ಮುಂದಾದರೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಪುಣ್ಯ ಸಿಗುತ್ತದೆ ಎಂದು ತಿಳಿಸಿದರು.
ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ದಿಲೀಪ್ ಕುಮಾರ್ ಮಾತನಾಡಿ, ಸಮಾಜದಿಂದ ಪಡೆದುಕೊಂಡಿದ್ದನ್ನು ಸಮಾಜಕ್ಕೇ ಹಿಂದಿರುಗಿಸುವ ದೊಡ್ಡಗುಣ ಇರುವವರು ಅತ್ಯಂತ ವಿರಳ, ಆದರೆ ಮೀನುಗಾರಿಕಾ ಸಂಘದ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್ ಮಾತನಾಡಿ, ಸಂಘದ ಆಶ್ರಯದಲ್ಲಿ ಈ ವರ್ಷ ಸಾರ್ವಜನಿಕ ಉಪಕಾರ ನಿಧಿಯಿಂದ ಆರ್ಥಿಕವಾಗಿ ಹಿಂದುಳಿದ 500ರಷ್ಟು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಂದರು ಸಂರಕ್ಷಣಾಧಿಕಾರಿ ಪ್ರವೀಣ್ ಚಂದ್ರ ಶೆಟ್ಟಿ, ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ಲತೀಫ್, ನಿರ್ದೇಶಕರಾದ ಯು.ಟಿ.ಅಹ್ಮದ್ ಶರೀಫ್, ಬಿ.ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯಿಲ್, ಎಸ್.ಎಂ.ಇಬ್ರಾಹಿಂ, ಟಿ.ಎಚ್.ಹಮೀದ್, ಸೂದತ್, ಬಿ.ಮುಹಮ್ಮದ್ ಶಾಲಿ, ಎ.ಎಂ.ಕೆ.ಮುಹಮ್ಮದ್ ಇಬ್ರಾಹಿಂ, ಬಿ.ಕೆ.ರಜಿಯಾ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.