ಮಂಗಳೂರು,ಮೇ17(DaijiworldNews/KH):ಯೋಧ ಎಂದು ಹೇಳಿ ಬಾಡಿಗೆಗೆ ಫ್ಲ್ಯಾಟ್ ಪಡೆಯುವುದಾಗಿ ನಂಬಿಸಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವ್ಯಕ್ತಿಯೋರ್ವರು ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲ್ಯಾಟ್ ಇರುವ ಬಗ್ಗೆ ವೆಬ್ ಸೈಟ್ ಒಂದರಲ್ಲಿ ಜಾಹೀರಾತು ನೀಡಿದ್ದರು.
ಅದನ್ನು ಗಮನಿಸಿದ ವ್ಯಕ್ತಿಯೋರ್ವ ತನ್ನನ್ನು ಸೈನಿಕ ದೀಪಕ್ ಪವಾರ್ ಎಂದು ಹೇಳಿ ಬೆಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿ ಫ್ಲ್ಯಾಟ್ ಖರೀದಿಸುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಮೇ 15ರಂದು ಸಂಜೆ ಮುಂಗಡವಾಗಿ 50,000 ರೂ. ಪಾವತಿಸುವುದಾಗಿ ತಿಳಿಸಿದ. ಅಲ್ಲದೆ ಈ ಬಗ್ಗೆ ಸೈನ್ಯದ ಶಿಬಿರ ಮೇಲಾಧಿಕಾರಿಗಳು ಕರೆ ಮಾಡುತ್ತಾರೆ ಎಂದೂ ತಿಳಿಸಿದ. ಬಳಿಕ ತನಗೆ ಅಧಿಕಾರಿಯೆಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ದೂರುದಾರರ ಬ್ಯಾಂಕ್ ಖಾತೆಗೆ ಸಂಪರ್ಕಗೊಂಡಿರುವ ಗೂಗಲ್ ಪೇ ಅಪ್ಲಿಕೇಷನ್ ತೆರೆಯಲು ಹೇಳಿದ. ಅದನ್ನು ನಂಬಿದ ತಾನು ಹಣ ಸ್ವೀಕರಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿ ಸೂಚಿಸಿದಂತೆಯೇ ಮಾಡಿದೆ. ಅಪರಿಚಿತ ವ್ಯಕ್ತಿಯು ತನ್ನ ಖಾತೆಗೆ ಹಣ ಸಂದಾಯ ಮಾಡಿದಂತೆ ತೋರಿಸಿ ವಹಿವಾಟು ವಿಫಲವಾಗಿದೆ ಎಂದ. ಹೀಗೆ ಎರಡು ಬಾರಿ ಮಾಡಿದ. ಈ ವೇಳೆ ತನ್ನ ಖಾತೆಯಿಂದಲೇ ಆತ 50,000 ರೂ. ಮತ್ತು 49,000 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ವ್ಯಕ್ತಿಯೋರ್ವರು ಮಂಗಳೂರಿನ ಸೆನ್ ಠಾಣೆಗೆ ದೂರು ನೀಡಿದ್ದಾರೆ.