ಪುತ್ತೂರು, ಮೇ 16 (DaijiworldNews/HR): ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಅರಣ್ಯ ಇಲಾಖೆಯ ಆವರಣಗೋಡೆಯ ಎದುರು ಬಿಜೆಪಿ ನಾಯಕರಾಗಿರುವ ಮಾಜಿ ಸಿಎಂ ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಭಾವಚಿತ್ರ ವಿರುವ ಬ್ಯಾನರ್ ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಎಂದು ಬರೆದು ಚಪ್ಪಲಿ ಹಾರ ಹಾಕಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಏಳು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಜೆಪಿ ನಾಯಕರಾಗಿರುವ ಮಾಜಿ ಸಿಎಂ ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಭಾವಚಿತ್ರ ವಿರುವ ಬ್ಯಾನರ್ ನಲ್ಲಿ 'ಭಾವಪೂರ್ಣ ಶ್ರದ್ಧಾಂಜಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ, ನೊಂದ ಹಿಂದೂ ಕಾರ್ಯಕರ್ತರು' ಎಂದು ಬರೆಯಲಾಗಿದೆ.
ಇನ್ನು ಬ್ಯಾನರ್ ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೇ 15 ಸಂಜೆ ನರಿಮೊಗರು ನಿವಾಸಿಗಳಾದ ವಿಶ್ವನಾಥ್ ಮತ್ತು ಮಾಧವ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಅವರೊಂದಿಗೆ ಇನ್ನೂ ಹಲವರಿದ್ದರು ಎಂಬ ಮಾಹಿತಿ ಮೇರೆಗೆ ಪತ್ತೆ ಕಾರ್ಯ ನಡೆಸಿದ ಪೊಲೀಸರು ತಡ ರಾತ್ರಿ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ.
ವಶಕ್ಕೆ ಪಡೆದುಕೊಂಡಿರುವ ಆರೋಪಿಗಳನ್ನು ಬೇಲೇಬಲ್ ಕೇಸ್ ಮಾಡಿ ಬಿಡಲಾಗಿದ್ದು, ಅವರ ವಿರುದ್ಧ ಶಾಂತಿಭಂಗ ಪ್ರಕರಣ ದಾಖಲಿಸಿ, ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಒಟ್ಟು 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಆರೋಪಿಗಳು ಹಿಂದುಗಳೆಂಬ ಮಾಹಿತಿ ತಿಳಿದಂತೆ ತಡರಾತ್ರಿ ಡಿವೈಎಸ್ಪಿ ಕಚೇರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ಮಾಡಿ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ.