ಬೆಳ್ತಂಗಡಿ, ಮೇ 15 (DaijiworldNews/HR): ವಿಜಯೋತ್ಸವದ ಹೆಸರಿನಲ್ಲಿ ಕಮಲಾಕ್ಷ ಗೌಡ ಎಂಬವರ ಮನೆಯ ಅಂಗಳಕ್ಕೆ ಪಟಾಕಿ ಸಿಡಿಸಿ ದಾಂದಲೆ ಮಾಡಿರುವ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅವರ ವಾಹನ ತಡೆದು ಬ್ಲಾಕ್ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ಹೆಸರಿನಲ್ಲಿ ಕಮಲಾಕ್ಷ ಗೌಡ ಎಂಬವರ ಮನೆಯ ಅಂಗಳಕ್ಕೆ ಪಟಾಕಿ ಸಿಡಿಸಿದನ್ನು ಪ್ರಶ್ನಿಸಿದಾಗ ಕಮಲಾಕ್ಷ ಗೌಡರಿಗೆ ಹಲ್ಲೆಗೆ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದು, ಇದನ್ನು ತಡೆಯಲು ಬಂದ ಅವರ ಹೆಂಡತಿಯನ್ನು ಮೈಗೆ ಕೈಹಾಕಿ ದೂಡಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ದೂರು ದಾಖಲಿಸಿದ ನಂತರ ಆರೋಪಿಗಳನ್ನು ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಕರೆ ತಂದು, ಎಫ್ಐಆರ್ ದಾಖಲಿಸದೆ ಬಿಡುಗಡೆ ಮಾಡಿದ್ದು, ಪೊಲೀಸರ ಧೋರಣೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಸದಸ್ಯರು ವೃತ್ತ ನಿರೀಕ್ಷಕರ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಮನೋಹರ ಇಳಂತಿಲ, ಜಯವಿಕ್ರಮ ಕಲ್ಲಾಪು, ಸುಧೀರ್ ದೇವಾಡಿಗ, ಸುರೇಶ್ ಸುವರ್ಣ, ಪ್ರೀತಂ ಶೆಟ್ಟಿ ಉಜಿರೆ, ಸುದರ್ಶನ ಮಂಜಿಲ, ರಜತ್ ಗೌಡ, ಕಮಲಾಕ್ಷ ಗೌಡ, ರಾಘವೇಂದ್ರ ಗೌಡ ಹಾಗೂ ಇನ್ನಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.