ಬಂಟ್ವಾಳ, ಮೇ 14 (DaijiworldNews/SM): ರಾಜ್ಯದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಸ್ಥಾನವನ್ನು ಪಡೆದ ವೇಳೆ ಬಂಟ್ವಾಳದಲ್ಲಿ ಕಾಂಗ್ರೆಸ್ ಗೆ ಸೋಲಾಯಿತು ಏಕೆ? ರಮಾನಾಥ ರೈ ಎಡವಿದೆಲ್ಲಿ, ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ವಿರುದ್ಧ ಸ್ಪರ್ಧೆಯಲ್ಲಿ ಎರಡನೇ ಬಾರಿಯೂ ಸೋತದ್ದು ಹೇಗೆ? ಎಂಬುದನ್ನು ಕಾಂಗ್ರೆಸ್ ವಿಮರ್ಶೆ ಮಾಡಬೇಕು. ಕಳೆದ ಬಾರಿ ಸಚಿವರಾಗಿದ್ದ ವೇಳೆ ಅನೇಕ ವಿಷಯಗಳು ರೈ ಅವರ ಸೋಲಿಗೆ ಕಾರಣವಾಯಿತು. ಆದರೆ ಈ ಬಾರಿ ಅಂತಹ ಯಾವುದೇ ರೀತಿಯ ವಿಚಾರಗಳು ಇಲ್ಲದಿದ್ದರೂ, ಕ್ಷೇತ್ರದಲ್ಲಿ ಓಡಾಟ ಮಾಡಿದರೂ, ಮತದಾರರ ಜೊತೆ ಇದ್ದರೂ ಸೋಲಾಯಿತು ಏಕೆ ಎಂಬುದು ಅಚ್ಚರಿಯ ವಿಚಾರ.
ಕಳೆದ ಅಪಪ್ರಚಾರದಿಂದ ಸೋಲಿಸಿದರು. ಆದರೆ ಈ ಬಾರಿ ಅರ್ಥ ಮಾಡಿಕೊಳ್ಳಲು ಅವಕಾಶ ಸಿಕ್ಕಿಲ್ಲ ಯಾಕೆ? ಎಂಬುದನ್ನು ನೋಡಬೇಕು. ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದ ನಿರುತ್ಸಾಹ ಕಾಂಗ್ರೆಸ್ ಸೋಲಿಗೆ ದೊಡ್ಡ ಕಾರಣವಾಯಿತು. ಬಿಜೆಪಿ ವಿರುದ್ದ ಸದ್ದು ಮಾಡದೇ ಕಾಂಗ್ರೆಸ್ ಮೌನವಾಗಿ ಕುಳಿತುಕೊಂಡದ್ದು ಕೂಡ ಪಕ್ಷಕ್ಕೆ ಮುಳುವಾಯಿತು. ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿ ಬಿಜೆಪಿ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಸಹಕಾರ ನೀಡದಿರುವುದು ಕೂಡ ಒಂದು ಕಾರಣವಾಗಿತ್ತು. ಬಿಜೆಪಿಯ ಬಗ್ಗೆ ಅಸಮಾಧಾನದಲ್ಲಿದ್ದ ವಿರೋಧಿ ಮತಗಳನ್ನು ಕಾಂಗ್ರೆಸ್’ನತ್ತ ಸೆಳೆಯಲು ವಿಫಲವಾಗಿದ್ದರು.
ಬಿಜೆಪಿ ಶಾಸಕರ ಯಾವುದೇ ಮೈನಸ್ ಪಾಯಿಂಟ್ ಗಳಿಲ್ಲದ ಕಾರಣ ಅವರ ಬಗ್ಗೆ ಯಾವುದೇ ವಿರುದ್ದ ಅಲೆಯನ್ನು ಎಬ್ಬಿಸಲು ಅಸಾಧ್ಯವಾಗಿತ್ತು. ಬಿಜೆಪಿಯ ಸಾಮಾಜಿಕ ಜಾಲತಾಣವನ್ನು ಹೋಲಿಸಿದರೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಪವರ್ ಪುಲ್ ಆಗಿರಲಿಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಎಡವಿದೆ. ಓರ್ವ ಯುವ ಅನುಭವಿ ಮತ್ತು ಕಳಂಕರಹಿತ ತಂಡಕ್ಕೆ ಸಾಮಾಜಿಕ ಜಾಲತಾಣದ ಜವಾಬ್ದಾರಿ ನೀಡಿದ್ದೇ ಆದರೆ ಕೆಲವೊಂದು ವಿಚಾರಗಳಲ್ಲಿ ಮತಪಡೆಯಲು ಸಾಧ್ಯವಾಗುತ್ತಿತ್ತು. ರಾಜ್ಯ ನಾಯಕರ ಭಜರಂಗದಳ ಸಂಘಟನೆಯ ನಿಷೇಧ ವಿಚಾರ ಇಡೀ ಜಿಲ್ಲೆಗೆ ಪೆಟ್ಟು ನೀಡಿತು. ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ನೀಡಿದ ಕಾರ್ಯಕ್ರಮಗಳು ಕೂಡ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಬಿಜೆಪಿ ಹಾಕಿಕೊಂಡ ಕಾರ್ಯಕ್ರಮಗಳನ್ನು ಕಾಪಿರೈಟ್ ಮಾಡಿದಂತೆ ಮಾಡಿದ್ದು ಕೂಡ ಮೈನಸ್ ಪಾಯಿಂಟ್.
ಮತಕ್ಕಾಗಿ ಹೆಚ್ಚು ಯಾರನ್ನು ಓಲೈಕೆ ಮಾಡದೆ ಇದ್ದದ್ದು ಹೀಗೆ ಅನೇಕ ಕಾರಣಗಳು ಕೊನೆಯ ಚುನಾವಣೆ ಎಂದರೂ ಮತವಾಗಿ ಮಾರ್ಪಾಡು ಮಾಡಲು ಸಾಧ್ಯವಾಗಿಲ್ಲ. ಪ್ರಮುಖವಾಗಿ ಆಡಳಿತ ವಿರೋಧಿ ವಿಚಾರಗಳ ಮೂಲಕ ವಿರೋಧಿ ಮತಗಳನ್ನು ಕಾಂಗ್ರೆಸ್ ನತ್ತ ಸೆಳೆಯಲು ಸಾಧ್ಯವಾಗದೆ ಕಾಂಗ್ರೆಸ್ ಬಂಟ್ವಾಳದಲ್ಲಿ ನೆಲಕಚ್ಚಿದೆ. ಅಭ್ಯರ್ಥಿ ಜೊತೆ ಇರುವ ನಾಯಕರುಗಳು ಇವರಿಗೆ ತಪ್ಪು ಸಂದೇಶಗಳನ್ನು ನೀಡಿ ಅವರ ದಾರಿ ತಪ್ಪಿಸುವ ಕೆಲಸ ಮಾಡಿದ್ದರಾ? ಮುಂದಿನ ದಿನಗಳಲ್ಲಿ ದ್ವೇಷದ ರಾಜಕೀಯ ಬಿಟ್ಟು ವಿರೋಧಿ ಮತಗಳನ್ನು ಸೆಳೆಯಲು ಪ್ರಯತ್ನ ಮಾಡಿ , ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಮಾಡಬೇಕಾದರೆ ಇಂತಹ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಉತ್ತಮ ತಂಡ ತಯಾರಿಸಲು ಮುಂದಾಗಬೇಕು.
ಏನೇ ಇರಲಿ ತಪ್ಪುಗಳನ್ನು ಅರಿತುಕೊಂಡು,ತಪ್ಪನ್ನು ಒಪ್ಪುವ ಮನಸ್ಥಿತಿ ಇದ್ದರೆ ಮತ್ತೆ ಕಾಂಗ್ರೆಸ್ ಇಲ್ಲಿ ಸಂಘಟನಾತ್ಮಕವಾಗಿ ಬೆಳೆಯುವ ಅವಕಾಶ ಇದೆ.