ಬಂಟ್ವಾಳ, ಮಾ29(SS): ಸುಮಾರು 3 ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ನೂತನ ಕೊಡಿಮರದ ತೈಲಾಧಿವಾಸ ಧಾರ್ಮಿಕ ಕಾರ್ಯಕ್ರಮ ಇಂದು ನಡೆಯಿತು.
ಕ್ಷೇತ್ರದ ಗರ್ಭಗುಡಿಯಷ್ಟೇ ಪ್ರಾಮುಖ್ಯತೆ ಹೊಂದಿರುವ ನಿಟ್ಟಿನಲ್ಲಿ ವೈದಿಕರ ಮಾರ್ಗದರ್ಶನದಂತೆ ನೂತನ ಧ್ವಜಸ್ಥಂಭ ಶ್ರೀ ಕಡಂಬಿಲ್ತಾಯಿ, ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸ್ಥಾಪನೆಗೊಳ್ಳಲಿದೆ. ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಪಟ್ಟದಬಲುವಿನಿಂದ ಕೊಡಿಮರ ಕ್ಷೇತ್ರಕ್ಕೆ ವಿಧಿ ವಿಧಾನದಂತೆ ತರಲಾಗಿತ್ತು. ಇದೀಗ ನೂತನ ಕೊಡಿಮರಕ್ಕೆ ತೈಲಾಧಿವಾಸ ನಡೆಯುತ್ತಿದೆ.
ನೂತನ ಕೊಡಿಮರಕ್ಕೆ ಎಳ್ಳೆಣ್ಣೆ ಹಾಕಲು ಬಯಸುವ ಭಕ್ತಾಧಿಗಳು, ಎಳ್ಳೆಣ್ಣೆಯ ಹಣವನ್ನು ನೀಡಿ ಕ್ಷೇತ್ರದಿಂದ ಎಣ್ಣೆ ಪಡೆದುಕೊಳ್ಳಲು ಅವಕಾಶವಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ತಿಳಿಸಿದೆ.
ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ ಜೈನ್ ಬಲ್ಲೋಡಿ ಗುತ್ತು, ದಾಮೋದರ್ ನಾಯಕ್ ಉಲಿ, ಜಯ ಶೆಟ್ಟಿ ಕಕ್ಕೆಪದವು, ಚೆನ್ನಪ್ಪ ಸಾಲ್ಯಾನ್, ಅಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.