ಬಂಟ್ವಾಳ, ಮೇ 14 (DaijiworldNews/HR): ದ್ವಿಚಕ್ರ ವಾಹನದಲ್ಲಿ ಬಂದ ಯುವಕನೋರ್ವ ವಿಟ್ಲ ಕಸಬ ಗ್ರಾಮದ ಬನ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನ್ಯಕೋಮೀನ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನನ್ನು ಕೂಡಲೇ ಬಂಧಿಸುವಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ರವರು ವಿಟ್ಲ ಠಾಣಾ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮೊದಲು ಯುವತಿ ಮನೆಗೆ ತೆರಳಿದ ಅವರು ಯುವತಿ ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿ ಅವರಿಗೆ ಧೈರ್ಯ ತುಂಬಿದರು. ಬಡತನದಲ್ಲಿರುವ ಕುಟುಂಬಕ್ಕೆ ತನ್ನ ಕೈಲಾದ ಸಹಾಯ ನೀಡುವುದಾಗಿ ಭರವಸೆ ನೀಡಿರುವ ಅವರು, ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.
ಇನ್ನು ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಜೊತೆ ಮಾತುಕತೆ ನಡೆಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.