ಬಂಟ್ವಾಳ, ಮೇ 13 (DaijiworldNews/HR): ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬೆಳ್ಳಿಪ್ಪಾಡಿ ಮತ್ತು ಉಳಿಪ್ಪಾಡಿಗುತ್ತು ಬಂಟರ ಗುತ್ತುಮನೆತನದ ಮಧ್ಯೆ ನಡೆದ ಪ್ರಬಲ ಸ್ಪರ್ಧೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು 8282 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಬಂಟ್ವಾಳ ಕ್ಷೇತ್ರದ ನಾಯಕರಾಗಿ ಮೂಡಿಬಂದಿದ್ದಾರೆ.
ಆರಂಭಿಕ ಹಂತದ ಅಂಚೆ ಮತದಾನದಲ್ಲಿ ಮಾತ್ರ ರಮಾನಾಥ ರೈ ಮುನ್ನಡೆಯನ್ನು ಸಾಧಿಸಿದ್ದರೆ, ಬಳಿಕ ರಾಜೇಶ್ ನಾಯ್ಕ ಅವರು ಕೊನೆಯ ಹಂತದವರೆಗೂ ಮುನ್ನಡೆಯನ್ನು ಸಾಧಿಸಿ ಗೆದ್ದು ಬೀಗುವ ಮೂಲಕ ಎರಡನೇ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ಫಲಿತಾಂಶ ಹೀಗಿದೆ:
ಒಟ್ಟು ಚಲಾಯಿತ ಮತಗಳು 1,83,428, ರಾಜೇಶ್ ನಾಯ್ಕ 93,324( ಬಿಜೆಪಿ), ರಮಾನಾಥ ರೈ(ಕಾಂಗ್ರೆಸ್) 85,042. ಪ್ರಕಾಶ್ ಗೋಮ್ಸ್ (ಜೆಡಿಎಸ್) 454, ಪುರುಷೋತ್ತಮ ಕೋಲ್ಪೆ (ಆಮ್ ಆದ್ಮಿ) 495,ಇಲಿಯಾಸ್ ಮಹಮ್ಮದ್ ತುಂಬೆ (ಎಸ್.ಡಿ.ಪಿಐ) 5436, ನೋಟಾ 821 ಗಮನಿಸಬೇಕಾದ ಅಂಶವಾಗಿದೆ.ಹಾಲಿ ಶಾಸಕ ರಾಜೇಶ್ ನಾಯ್ಕ ಅವರ ಗೆಲುವಿನ ಅಂತರ 8282 ಅಗಿದ್ದು, ಶೇಕಡಾವಾರು 50.29 ಮತಗಳಿಸಿ ಪೂರ್ಣ ಜಯ ಸಾಧಿಸಿದ್ದಾರೆ.
ಇನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಚುನಾವಣೆ ಘೋಷಣೆಗೆ ಮುನ್ನ ಹಾಗೂ ತಮ್ಮ ಚುನಾವಷಾ ಪ್ರಚಾರದುದ್ದಕ್ಕೂ ಇದು ತನ್ನ ಕೊನೆಯ ಚುನಾವಣೆ ಎಂದು ಭಾವನಾತ್ಮಕವಾಗಿ ಹೇಳಿ ಅನುಕಂಪಗಿಟ್ಟಿಸಿದರೂ, ತನ್ನ ಒಂಭತ್ತನೇ ಸ್ಪರ್ಧೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಒಟ್ಟು 6 ಬಾರಿ ಶಾಸಕರಾಗಿದ್ದ ರಮಾನಾಥ ರೈ ಅವರು ಮೂರು ಬಾರಿ ಸೋಲು ಅನುಭವಿಸಿದ್ದಾರೆ.
ವಿಧಾನಸಭೆಗೆ ಮೂರು ಬಾರಿ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ, ಮೊದಲ ಬಾರಿ ಸೋತರೂ ಬಳಿಕ ಸತತ ಎರಡನೇ ಬಾರಿ ರಾಜೇಶ್ ನಾಯ್ಕ ಉಳಿಪಾಡಿಗುತ್ತು ಅವರು ಗೆಲುವು ಸಾಧಿಸಿದ್ದಾರೆ.
2015ರಲ್ಲಿ ಸೋಲು ಕಂಡರೂ ಮತ್ತೆ 2018ರಲ್ಲಿ ಸ್ಪರ್ಧಿಸಿದ್ದ ರಾಜೇಶ್ ನಾಯ್ 15,971 ಮತಗಳ ಅಂತರದಿಂದ ಗೆದ್ದು ಮುಯ್ಯಿ ತೀರಿಸಿಕೊಂಡಿದ್ದರು. ಬಳಿಕ ಶಾಸಕರಾಗಿ ರಾಜೇಶ್ ನಾಯ್ಕ್ ಅವರು ರಾಜಧರ್ಮದ ಆಡಳಿತ ನೀಡಿದ್ದು, 2000ಕೋಟಿಗೂ ಮಿಕ್ಕಿ ಅನುದಾನ ತರಿಸಿ ಅಭಿವೃದ್ಧಿ ಕಾರ್ಯ ನಡೆಸಿದ್ದರು, ಯಾವುದೇ ಕೋಮುಗಲಭೆಗಳಿಲ್ಲದೆ ಶಾಂತಿಯುತ ಬಂಟ್ವಾಳ ಸ್ಥಾಪಿಸಿದ ಹಿರಿಮೆಯೂ ಇವರದಾಗಿತ್ತು.
ಈ ಸಾಧನೆಯನ್ನು ಮುಂದಿಟ್ಟು ಚುನಾವಣಾ ಕಣಕ್ಕಿಳಿದ ರಾಜೇಶ್ ನಾಯ್ಕ್ ಅವರು 2023ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆಯಾದರೂ ಗೆಲುವಿನ ಅಂತರ ಕಡಿಮೆಯಾಗಿದೆ. ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ಅವರ ಒಟ್ಟು ಮೂರು ಮುಖಾಮುಖಿಯಲ್ಲಿ 2-1 ಅಂತರದ ಸರಣಿ ಜಯ ರಾಜೇಶ್ ನಾಯ್ಕ ಅವರಿಗೆ ದಕ್ಕಿದೆ.
ಒಡ್ಡೂರಿನ ತನ್ನ ಮನೆಯಲ್ಲೇ ಕುಳಿತು ಫಲಿತಾಂಶ ವೀಕ್ಷಿಸುತ್ತಿದ್ದ ರಾಜೇಶ್ ನಾಯ್ಕ್ ಅವರು ತಮ್ಮ ಗೆಲುವಿನ ಘೋಷಣೆಯಾಗುತ್ತಿದ್ದಂತೆ ಒಡ್ಡೂರು ಧರ್ಮಚಾವಡಿಯಲ್ಲಿರುವ ಧರ್ಮದೈವ ರಾಜ್ಯ ಕೊಡಮಣಿತ್ತಾಯ ದೈವಕ್ಕೆ ಪ್ರಾರ್ಥನೆ ಸಲ್ಲಿಸಿ ತಮ್ಮ ಗೆಳೆಯ ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ,ರಶ್ಮಿತ್ ಶೆಟ್ಟಿ ಹಾಗೂ ಕಾರ್ಯಕರ್ತರೊಂದಿಗೆ ಸುರತ್ಕಲ್ ಎನ್ .ಐ .ಟಿ .ಕೆ ಮತ ಎಣಿಕೆ ಕೇಂದ್ರಕ್ಕೆ ತೆರಳಿದರು. ಪ್ರಮಾಣ ಪತ್ರ ಸ್ವೀಕರಿಸಿ,ಪಕ್ಷದ ಜಿಲ್ಲಾ ಕಚೇರಿಗೆ ತೆರಳಿ ಬಳಿಕ ಅಲ್ಲಿಂದ ನೇರ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನಕ್ಕಾಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ವೇಳೆ ಅವರು ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ನಾಮಪತ್ರ ಇರಿಸಿ ಪ್ರಾರ್ಥನೆ ಸಲ್ಲಿಸಿದ್ದರು.ಅಲ್ಲಿಂದ ಪಾದಯಾತ್ರೆ ಮೂಲಕ ಬಿ.ಸಿ.ರೋಡಿಗೆ ಅಗಮಿಸಿ ನಾಮಪತ್ರ ಸಲ್ಲಿಸಿದ್ದು ಗಮನಾರ್ಹ ಅಂಶವಾಗಿದೆ. ಪೊಳಲಿಯಿಂದ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಗಾಗಮಿಸಿ ಕಾರ್ಯಕರ್ತರು,ಪ್ರಮುಖರ ಜೊತೆ ಗೆಲುವಿನ ಸಂಭ್ರಮಾಚರಿಸಿದರು.
ರಾಜೇಶ್ ನಾಯ್ಕ್ ಅವರು ಗೆಲುವಿನ ಘೋಷಣೆಯಾಗುತ್ತಿದ್ದಂತೆ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಜಮಾಯಿಸಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಜೈಕಾರ ಕೂಗಿ ಸಂಭ್ರಮಿಸಿದರು.ಪಕ್ಷದ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ,ಶ್ರೀಧರ ಶೆಟ್ಟಿ ಪುಳಿಂಚ,ಡೊಂಬಯ ಅರಳ, ಪುರುಷೋತ್ತಮ ಸಾಲಿಯಾನ್ ನರಿಕೊಂಬು,ನವೀನ್ ಆಯೋಧ್ಯ,ಪ್ರಕಾಶ್ ಅಂಚನ್,ಚರಣ್ ಜುಮಾದಿಗುಡ್ಡೆ,ಪುರುಷೋತ್ತಮ ಪೂಜಾರಿ ಮಜಲು,ಮಾಧವ ಕರ್ಬೆಟ್ಟು,ಉದಯ ಕುಮಾರ್ ನಗ್ರಿ ಕಾಂಜಿಲ,ಸತೀಶ್ ಶೆಟ್ಟಿ ಪಲ್ಲಮಜಲು ಮೊದಲಾದವರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಬಂಟ್ವಾಳ ಕ್ಷೇತ್ರದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ಸೋಲು ಪಕ್ಷದ ಸ್ಥಳೀಯ ನಾಯಕರಿಗೆ ಮರ್ಮಾಘಾತವನ್ನೇ ನೀಡಿದ್ದು, ಈ ಫಲಿತಾಂಶದಿಂದ ಬಿ.ಸಿ.ರೋಡಿನ ಚುನಾವಣಾ ಕಚೇರಿಯಲ್ಲಿ ಕಳೆಗುಂದಿತ್ತು.ಪಕ್ಷದ ಒಂದಷ್ಟು ಕಾರ್ಯಕರ್ತರ ಹೊರತುಪಡಿಸಿ ನಾಯಕರು ಯಾರು ಇರಲಿಲ್ಲ.