ಮಂಗಳೂರು, ಮಾ 29 (MSP): ಲೋಕಸಭೆ ಚುನಾವಣೆಯ ಬೆನ್ನಲ್ಲೇ ರಣ ಕಣ ರಂಗೇರ ತೊಡಗಿದೆ. ಮತ್ತೊಂದೆಡೆ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯೂ ಜೋರಾಗಿದೆ. ಲೋಕಸಭೆಯ ಎಲೆಕ್ಷನ್ ನ ಕಾವು ಏರತೊಡಗಿದ್ದು, ವಿವಿಧ ಅಭ್ಯರ್ಥಿಗಳು, ಮುಖಂಡರು ಕಾರ್ಯಕರ್ತರು, ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೊಂದೆಡೆ ದ.ಕ ಸ್ಪರ್ಧಿಗಳು ಜಿಲ್ಲೆಯ ವಿವಿಧೆಡೆಯಲ್ಲಿ ವಿರೋಧಿ ಪಕ್ಷಗಳ ಮೇಲೆ ಟೀಕಾಪ್ರಹಾರಗಳನ್ನೇ ಸುರಿಸುತ್ತಿದ್ದಾರೆ.
ಇನ್ನೊಂದೆಡೆ ಕೈ ಕಮಲ ಪ್ರಚಾರದ ನಡುವೆಯೇ ಟೆಂಪಲ್ ರನ್ ಆರಂಭಿಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳಿಗೆ ಧಾರ್ಮಿಕ ಕ್ಷೇತ್ರಗಳು ಹತ್ತಿರವಾಗತೊಡಗಿದೆ. ದ.ಕ .ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ಬಿಜೆಪಿ ಸದಸ್ಯರು, ಕಾರ್ಯಕರ್ತರೊಂದಿಗೆ ಮಂಗಳೂರಿನಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಮಂಗಳದೇವಿ ದೇವಸ್ಥಾನ,ಉರ್ವ ಶ್ರೀ ಮಾರಿಯಮ್ಮ ಶರವು ಶ್ರೀ ಮಹಾಗಣಪತಿ, ಭೇಟಿ ನೀಡಿ ಪ್ರಚಾರ ಪ್ರಾರಂಭಿಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಕೂಡಾ ತನ್ನ ಬೆಂಬಲಿಗರೊಂದಿಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಮಾಜಿ ಶಾಸಕ ಜೆ.ಆರ್.ಲೋಬೊ ಅವರರೊಂದಿಗೆ ಕುದ್ರೋಳಿಪರಿಸರದಲ್ಲಿ ಮತಯಾಚನೆ ಮಾಡಿ ಪ್ರಚಾರವನ್ನು ಬಿರುಸುಗೊಳಿಸಿದರು.