ಮಂಗಳೂರು, ಮಾ 29 (MSP): 'ವಿಜಯ ಬ್ಯಾಂಕ್ ಉಳಿಸಿಕೊಳ್ಳುವುದು ಕರಾವಳಿಯ ಅಸ್ಮಿತೆಯ ವಿಷಯ ' ಎಂದು ಕರಾವಳಿಗರೂ ಸಾಕಷ್ಟು ಹೋರಾಟ ಮಾಡಿದರೂ, ವಿಜಯ ಬ್ಯಾಂಕ್ ಏ.1 ರಿಂದ ತನ್ನ ಐಡೆಂಟಿಡಿ ಕಳೆದುಕೊಳ್ಳಲಿದೆ. ವಿಜಯ ಬ್ಯಾಂಕ್ ಕೊನೆಗೂ ಬ್ಯಾಂಕ್ ಆಫ್ ಬರೋಡಾ ಜತೆ ವಿಲೀನಗೊಳಿಸುವ ಸಂಬಂಧ ಇದೀಗ ಅಧಿಕೃತವಾಗಿ ಗ್ರಾಹಕರಿಗೆ ಸಂದೇಶ ರವಾನೆಯಾಗಿದೆ. ಹೀಗಾಗಿ ಏ.1ರಿಂದ ವಿಜಯ ಬ್ಯಾಂಕ್ ಅಸ್ಮಿತೆ ನಾಶವಾಗಿ ಇತಿಹಾಸದ ಪುಟ ಸೇರುವುದು ದೃಢವಾಗಿದೆ.
ಲಾಭದಲ್ಲಿರುವ ಕರಾವಳಿ ಮೂಲದ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿ ‘ಬ್ಯಾಂಕ್ ಆಫ್ ಬರೋಡಾ’ ಹೆಸರನ್ನೇ ಅಂತಿಮಗೊಳಿಸಿರುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಕರಾವಳಿಯಲ್ಲಿ ವಿರೋಧ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಾಕಷ್ಟು ಹೋರಾಟದ ಬಳಿಕ ಅಂತಿಮ ಕ್ಷಣದಲ್ಲಿ ಲಾಭದಲ್ಲಿರುವ ವಿಜಯ ಬ್ಯಾಂಕ್ ಅನ್ನು ವಿಲೀನ ಪ್ರಕ್ರಿಯೆಯಿಂದ ಕೈಬಿಡಬಹುದು ಎನ್ನುವ ನಿರೀಕ್ಷೆ ಹೋರಾಟಗಾರರಲ್ಲಿ ಇತ್ತು.. ಆ ನಿರೀಕ್ಷೆ ಇದೀಗ ಕೊನೆಗೂ ಹುಸಿಯಾಗಿದೆ. ಏ.1 ರಿಂದ ವಿಜಯ ಬ್ಯಾಂಕ್ ವ್ಯವಹಾರಗಳು ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆ ವಿಲೀನಗೊಳ್ಳುವ ಮೂಲಕ ಎಲ್ಲಾ ಸೇವೆಗಳು ಈ ಹಿಂದಿನಂತೆ ಮುಂದುವರಿಯಲಿದೆ ಎನ್ನುವ ಅಧಿಕೃತ ಎಸ್ ಎಂ ಎಸ್ ಸಂದೇಶ ಎಲ್ಲಾ ವಿಜಯ ಬ್ಯಾಂಕ್ ರವಾನೆಯಾಗಿದೆ.
"ಬ್ಯಾಂಕ್ಗಳ ತೊಟ್ಟಿಲು" ಎಂದೇ ಖ್ಯಾತಿ ಪಡೆದಿರುವ ಕರಾವಳಿಯಲ್ಲಿಯೇ ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹಾಗೂ ಖಾಸಗಿ ಕರ್ನಾಟಕ ಬ್ಯಾಂಕ್ಗಳು ಸ್ಥಾಪನೆಯಾಗಿದ್ದು . ಈ ಪೈಕಿ ಕಾರ್ಪೊರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಂಗಳೂರಿನಲ್ಲಿದ್ದರೆ, ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಚೇರಿ ಮಣಿಪಾಲದಲ್ಲಿದೆ. ಉಳಿದೆಲ್ಲ ಬ್ಯಾಂಕ್ಗಳು ಪ್ರಧಾನ ಕಚೇರಿಗಳು ಬೆಂಗಳೂರಿಗೆ ಸ್ಥಳಾಂತರಗೊಂಡಿವೆ.
ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರಿಂದ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಸಣ್ಣ ಕೊಠಡಿಯೊಂದರಲ್ಲಿ ಪ್ರಗತಿಪರ ರೈತರ ಬೆಂಬಲದೊಂದಿಗೆ ವಿಜಯ ಬ್ಯಾಂಕ್ ಸ್ಥಾಪನೆಯಾಯಿತು. ವಿಜಯ ದಶಮಿಯಂದು ಬ್ಯಾಂಕ್ ಪ್ರಾರಂಭಗೊಂಡಿದ್ದರಿಂದ ವಿಜಯ ಬ್ಯಾಂಕ್ ಎನ್ನುವ ಹೆಸರನ್ನು ಇಡಲಾಯಿತು. ಆದರೆ ಇವೆಲ್ಲವೂ ಕರಾವಳಿಗರ ಪಾಲಿಗೆ ಇನ್ನುಮುಂದೆ ನೆನಪು ಮಾತ್ರ.