ಪುತ್ತೂರು, ಮಾ29(SS): ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಏ.10ರಿಂದ 19ರವರೆಗೆ ಜಾತ್ರೋತ್ಸವ ನಡೆಯಲ್ಲಿದ್ದು, ಅದೇ ಸಮಯದಲ್ಲಿ ಚುನಾವಣೆಯೂ ನಡೆಯಲಿದೆ. ಈ ಬಾರಿ ಏ. 18ರಂದು ಲೋಕಸಭೆ ಚುನಾವಣೆ ದಿನ ನಿಗದಿಯಾಗಿದೆ.
ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಹಲವಾರು ಬಾರಿ ಚುನಾವಣೆ ಸಮಯದಲ್ಲೇ ಬಂದಿವೆ. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ. ಚುನಾವಣೆಯಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕಾಗಿ ಪುತ್ತೂರಿನಿಂದ ವೀರಮಂಗಲಕ್ಕೆ ಹೋಗುತ್ತಾರೆ.
2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯೂ ಪುತ್ತೂರು ಜಾತ್ರೆಯ ವೇಳೆಯೇ ಬಂದಿದ್ದು, ಬ್ರಹ್ಮರಥೋತ್ಸವದ ದಿನವಾದ ಏ.17ರಂದು ಚುನಾವಣೆ ನಡೆದಿತ್ತು. 2014ರಲ್ಲಿ ನಡೆದ ಲೋಕಸಭೆ ಚುನಾವಣೆ ಕೂಡ ಪುತ್ತೂರು ಜಾತ್ರೆಯ ಸಂದರ್ಭದಲ್ಲೇ ಬಂದಿತ್ತು.
2018ರಲ್ಲಿ ಮಾತ್ರ ಮೇ 12ರಂದು ವಿಧಾನಸಭೆ ಚುನಾವಣೆ ನಡೆದ ಕಾರಣ ಆಗ ಜಾತ್ರೋತ್ಸವದ ಅವಧಿ ಮೀರಿತ್ತು.
ವಿಶೇಷವೆಂದರೆ, ಪುತ್ತೂರು ಜಾತ್ರೋತ್ಸವ ಸಂದರ್ಭ, ಅದರಲ್ಲೂ ಬ್ರಹ್ಮರಥೋತ್ಸವ ದಿನ, ಹಿಂದಿನ ದಿನ ಅಥವಾ ಮರುದಿನ ಮತದಾನ ನಡೆದರೆ ಪುತ್ತೂರು ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುತ್ತದೆ. ಪುತ್ತೂರು ಜಾತ್ರೆಗೆಂದು ಪರವೂರಿನಲ್ಲಿರುವ ಪುತ್ತೂರಿಗರು ಊರಿಗೆ ಬರುತ್ತಾರೆ. ಕಾರಣ, ಮತದಾನ ಪ್ರಮಾಣ ಹೆಚ್ಚಳವಾಗುತ್ತದೆ.