ಉಡುಪಿ, ಮಾ 28(SM): ಚುನಾವಣೆಗೆ ಸಾಕಷ್ಟು ಖರ್ಚಿದ್ದು, ಅದನ್ನು ಜನ ಸಾಮಾನ್ಯರಿಂದಲೇ ಸಂಗ್ರಹಿಸುತ್ತಿದ್ದೇನೆ. ಚುನಾವಣೆಯಲ್ಲಿ ಗೆದ್ದು ಜನರ ಸೇವೆ ಮಾಡುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ಹೇಳಿದ್ದಾರೆ.
ಚುನಾವಣೆಗೆ ದೇಣಿಗೆ ಸಂಗ್ರಹಿಸುವ ಕಾರ್ಯದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನೇಕ ಜನ ನನ್ನ ಸ್ನೇಹಿತರ ಕೋರಿಕೆಯಂತೆ ಸಮಾಜ ಸೇವೆ ಮಾಡುವ ತುಡಿತದೊಂದಿಗೆ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ತೊರೆದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅಮೃತ್ ಶೆಣೈ ಹೇಳಿದ್ದಾರೆ.
ನಾನು ಈಗಾಗಲೇ ನಾಮಪತ್ರ ಸಲ್ಲಿಸಿದ್ದೇನೆ. ಆದರೆ ಚುನಾವಣಾ ಸಂಬಂಧಿ ಖರ್ಚು ವೆಚ್ಚಗಳಿಗಾಗಿ ಹಣದ ಅಗತ್ಯವಿದ್ದು, ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಗೆದ್ದ ಬಳಿಕ ಜನ ಸೇವೆಯೇ ನನ್ನ ಆದ್ಯತೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳ ಕಾಲ ದುಡಿದ ನಮಗೆ ಪಕ್ಷ ದ್ರೋಹ ಮಾಡಿದೆ. ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧಿಸುವ ಅಗತ್ಯ ಏನಿದೆ ಎಂದು ಮತ್ತೆ ಪ್ರಶ್ನಿಸಿದ ಅವರು ಈ ಬಾರಿ ಜೆಡಿಎಸ್, ಕಾಂಗ್ರೆಸ್ ಪಕ್ಷವನ್ನು ಜನ ಸೋಲಿಸಲಿದ್ದು, ನನ್ನನ್ನು ಗೆಲ್ಲಿಸುವುದು ಖಚಿತ ಎಂದರು.