ಸುಳ್ಯ,ಮಾ 28(MSP): ಕೇಂದ್ರದ ಮೋದಿ ಸರಕಾರ ಘೋಷಣೆ ಮಾಡಿರುವ ಯೋಜನೆಗಳೆಲ್ಲ ಚುನಾವಣೆಯಲ್ಲಿ ಗೆಲ್ಲಲು ಮಾಡಿರುವ ಜುಮ್ಲಾ ಯೋಜನೆಗಳು. ಹಿಂದಿನ ಯುಪಿಎ ಸರಕಾರದ ಯೋಜನೆಗಳು ಮತ್ತು ಮುಂದಿನ ಚುನಾವಣೆಯ ಪ್ರಣಾಳಿಕೆಯ ಭರವಸೆಗಳು ಚುನಾವಣೆಯಲ್ಲಿ ಗೆಲ್ಲಲು ಮಾಡಿರುವ ಕಾರ್ಯತಂತ್ರದ ಜುಮ್ಲಾ ಅಲ್ಲ. ಬದಲಾಗಿ ಸಾಮಾನ್ಯ ಜನರಿಗೆ ಸ್ವಾಭಿಮಾನದ ಬದುಕು ನೀಡುವ ಕಾರ್ಯಕ್ರಮಗಳು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳು ಜುಮ್ಲಾ. ಯುಪಿಎ ಸರಕಾರ ಜಾರಿಗೆ ತಂದಿರುವ ಜನತೆಗೆ ಕೂಲಿ ನೀಡುವ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಜಗತ್ತಿನ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. ಕಾಂಗ್ರೆಸ್ ನೀಡುವ ಭರವಸೆಗಳನ್ನು ಅಧಿಕಾರಕ್ಕೆ ಬಂದಿರುವ ಎಲ್ಲಾ ಕಾಂಗ್ರೆಸ್ ಸರಕಾರಗಳು ಈಡೇರಿಸಿ ನಾಗರಿಕರಿಗೆ ಸ್ವಾಭಿಮಾನದ ಬದುಕು ನೀಡಿದೆ. ನಮ್ಮ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡದ ಕಳಪೆ ಸಂಸದ ಎಂದು ಅವರ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ. ಕಟೀಲ್ ಅವರ ಹಿಂದಿನ ಸಂಸದರು ಕೂಡ ಜಿಲ್ಲೆಯ ಅಭಿವೃದ್ದಿಗೆ ನೀಡಿದ ಕೊಡುಗೆ ಶೂನ್ಯ. ಜಿಲ್ಲೆಯ ಕಾಂಗ್ರೆಸ್ ಸಂಸದರ ನೀಡಿದ ಯೋಜನೆಗಳ ಹೆಜ್ಜೆ ಗುರುತುಗಳು ಈಗಲೂ ಕಾಣಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಲಾಭದಲ್ಲಿರುವ ವಿಜಯಬ್ಯಾಂಕ್ನ್ನು ವಿಲೀನ ಮಾಡಲು ಹೊರಟಿದ್ದಾರೆ. ಕಿದುವಿನ ತೋಟಗಾರಿಕಾ ಸಂಶೋಧನ ಸಂಸ್ಥೆಯನ್ನು ಸ್ಥಳಾಂತರ ಮಾಡಲು ಯತ್ನಿಸುತ್ತಿದ್ದಾರೆ. ಜಿಲ್ಲೆಯ ಬಂದಿರುವ ಕೀರ್ತಿಯನ್ನು ಅಳಿಸಿ ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ. ಜಿಲ್ಲೆಗೆ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ರೈಲ್ವೇ ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳು, ಬಂದರು, ಎಂಆರ್ಪಿಎಲ್, ಒಎನ್ಜಿಸಿ ಅಂತಹ ಕಂಪೆನಿಗಳು ಬಂದಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ನಾಯಕರು ಮತ್ತು ಸರಕಾರ. ಮೋದಿಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಜಿಲ್ಲೆಗೆ ಒಂದೇ ಒಂದು ಯೋಜನೆಗಳು ಬಂದಿಲ್ಲ. ಯಾವ ಕಾರಣ ಇಟ್ಟು ಮೋದಿಗೆ ಮತ ಕೇಳುತ್ತಿದ್ದಾರೆ ಜನಧನ್ ಯೋಜನೆಯಿಂದ ಯಾರಿಗೂ ಹತ್ತು ಪೈಸೆ ಸಿಕ್ಕಿಲ್ಲ. ಯುವ ಜನರಿಗೆ ಉದ್ಯೋಗ ಸಿಕ್ಕಿಲ್ಲ. ಸಿದ್ದರಾಮಯ್ಯ ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದ್ದಾರೆ ಎಂದು ಹೇಳಿದ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ವಿಜಯಬ್ಯಾಂಕ್ ವಿಲೀನ ಮಾಡುವುದಿಲ್ಲ, ಕಿದುವಿನ ತೋಟಗಾರಿಗೆ ಸಂಶೋಧನ ಸಂಸ್ಥೆಯನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಏ.2 ರಂದು ಬೆಳ್ಳಾರೆಯಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ
ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶಗಳನ್ನು ಮಾಡಲಿದ್ದೇವೆ. ಏ. 2 ರಂದು ಸುಳ್ಯದ ಬೆಳ್ಳಾರೆಯಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ರಮಾನಾಥ ರೈ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ. ವೆಂಕಪ್ಪ ಗೌಡ, ಟಿ.ಎಂ. ಶಹೀದ್, ಕಾಂಗ್ರೆಸ್ ಮುಖಂಡರಾದ ಡಾ. ರಘು, ಪಿ.ಪಿ. ವರ್ಗೀಸ್, ಎಸ್. ಸಂಶುದ್ದೀನ್, ಗೀತಾ ಕೋಲ್ಚಾರ್, ರಾಜೀವಿ ಆರ್ ರೈ, ದಿವ್ಯಪ್ರಬಾ ಚಿಲ್ತಡ್ಕ, ಪಿ.ಸಿ. ಜಯಾರಾಂ, ಮಹಮ್ಮದ್ ಕುಂಞಿ ಗೂನಡ್ಕ, ದಿವಾಕರ ಗೌಡ ಕಡಬ, ಪಿ.ಎಸ್. ಗಂಗಾಧರ, ದಿನೇಶ್ ಅಂಬೆಕಲ್ಲು, ನಂದರಾಜ್ ಸಂಕೇಶ, ಧರ್ಮಪಾಲ ಕೊಯಿಂಗಾಜೆ ಪಿ.ಎ. ಮಹಮ್ಮದ್, ಚಂದ್ರಶೇಖರ್ ಕಾಮತ್, ಜಿ.ಕೆ.ಹಮೀದ್, ಪರಮೇಶ್ವರ ಕೆಂಬಾರೆ, ಲಕ್ಷ್ಮೀ ಸುಬ್ರಹ್ಮಣ್ಯ, ಕೆ.ಎಂ.ಮುಸ್ತಫ, ಕೆ.ಕೆ. ಹರಿಪ್ರಸಾದ್, ಸಿದ್ದಿಕ್ ಕೊಕ್ಕೊ ಮೊದಲಾದವರು ಉಪಸ್ಥಿತರಿದ್ದರು