ಪುತ್ತೂರು, ಮಾ28(SS): ಮುಂದಿನ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ನರೇಂದ್ರ ಮೋದಿ ಪ್ರಧಾನಿಯೂ ಆಗುವುದಿಲ್ಲ ಎಂದು ರಾಜ್ಯ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅಭಿವೃದ್ಧಿಯ ವಿಚಾರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲತೆಯನ್ನು ಕಂಡಿದೆ. ಪಾಕಿಸ್ಥಾನಕ್ಕೆ ಹೋಗಿ ಚಹಾ ಕುಡಿಯುವ ಪ್ರಧಾನಿ ಮೋದಿಯವರು ದೇಶದ ಸೈನಿಕರ ಮನೆಗೆ ಭೇಟಿ ಕೊಟ್ಟು ಸಾಂತ್ವನ ನೀಡುವ ಕೆಲಸ ಮಾಡಿಲ್ಲ. ನೋಟು ಅಮಾನ್ಯದಿಂದಾಗಿ 150ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. ಅವರ ಬಗ್ಗೆ ಏನೂ ವಿಚಾರಿಸಿಲ್ಲ. ಮರಣದ ಬಗ್ಗೆ ವರದಿ ಕೇಳಿಲ್ಲ. ಇಂತಹ ಮಾನವೀಯತೆ ಇಲ್ಲದ ಸರ್ಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಬಡವರ ಹೊಟ್ಟೆ ತುಂಬಿಸುವ ಯಾವುದೇ ಯೋಜನೆ ಜಾರಿಯಾಗಿಲ್ಲ. ಮೋದಿ ಸರ್ಕಾರದಲ್ಲಿ ಸುಪ್ರಿಂ ಕೋರ್ಟ್ನ ನ್ಯಾಯಾಧೀಶರು ತನಗೆ ದಮ್ಮು ಕಟ್ಟುವ ಪರಿಸ್ಥಿತಿಯಿದೆ ಎಂದಿರುವುದು, ಆರ್.ಬಿ.ಐ ಗವರ್ನರ್ ರಾಜೀನಾಮೆ ನೀಡಿರುವುದು, ಸಿಬಿಐ ಅಧಿಕಾರಿ ರಾಜೀನಾಮೆ, ನೋಟು ಅಮಾನ್ಯತೆ, ರಫೇಲ್ ಒಪ್ಪಂದ ಪ್ರಕರಣಗಳು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ರಫೇಲ್ ದಾಖಲಾತಿ ಕಳವಾಗಿದೆ ಎಂದು ಹೇಳಿಕೆ ನೀಡಿ ದೇಶವೇ ತಲೆ ತಗ್ಗಿಸುವಂತೆ ಮೋದಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಹಾಗೂ ಹಿರಿಯರಾದ ಜನಾರ್ಧನ ಪೂಜಾರಿಯವರು ಈ ಬಾರಿಯ ಲೋಕಸಭಾ ಚುನಾವಣೆಯ ಸಾರಥ್ಯವನ್ನು ವಹಿಸಿಕೊಂಡು ಮುನ್ನಡೆಸಲಿದ್ದಾರೆ. ಅವರ ನೇತೃತ್ವದಲ್ಲಿ ಮಿಥುನ್ ರೈ ಜಯ ಪಡೆಯಲಿದ್ದಾರೆ ಹೇಳಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಸಂಸದ ನಳಿನ್ ಕುಮಾರ್ ಕಟೀಲ್ 10 ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಲೋಕಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಇಂತಹ ಸಂಸದರಿಂದ ಜಿಲ್ಲೆಯ ಜನತೆಗೆ ನಿರೀಕ್ಷೆಯಿಲ್ಲ. ಅದಕ್ಕಾಗಿ ಈ ಬಾರಿ ಯುವಕರಾಗಿದ್ದು ತನ್ನ ಧರ್ಮವನ್ನು ಆಚರಿಸುವುದರೊಂದಿಗೆ ಇತರ ಧರ್ಮವನ್ನು ಗೌರವಿಸುವ ಮಿಥುನ್ ರೈ ಅವರನ್ನು ಜಿಲ್ಲೆಯ ಮತದಾರರು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.