ಬಂಟ್ವಾಳ, ಮಾ28(SS): ಬಿಜೆಪಿಯವರು ಜಿಲ್ಲೆಯಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಮತಗಳಾಗಿ ಪರಿವರ್ತಿಸಿರುವುದು ನಮ್ಮ ಜಿಲ್ಲೆಯ ದುರಂತ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು, ಜನರನ್ನು ದಾರಿ ತಪ್ಪಿಸಿ ಮೋಸ ಮಾಡಿ ಗೆದ್ದುಕೊಂಡು ಬಂದಿದ್ದಾರೆ. ಆದರೆ, ಅವರು ಅಭಿವೃದ್ಧಿ ಪರವಾದ ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಅಭಿವೃದ್ದಿಗೆ ಏನೂ ಕೊಡುಗೆ ನೀಡಿಲ್ಲ. ಇವರ ವೈಫಲ್ಯ ಈ ಬಾರಿ ದ.ಕ ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಸಾಕಾರಗೊಳಿಸಲಿದೆ. ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಮಾಡುತ್ತಲೇ ಬಂದಿದೆ. ಕಳೆದ ಭಾರಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಂಸದರು ಮಂಗಳೂರಿನ ಬಂದರು, ವಿವಿಧ ಕೈಗಾರಿಕೆಗಳು, ರೈಲ್ವೆ ನಿಲ್ದಾಣ, ಪಾಸ್ಪೊರ್ಟ್ ಪ್ರಾದೇಶಿಕ ಕಚೇರಿಗಳು, ವಿಮಾನ ನಿಲ್ದಾಣ, ಮುಂತಾದ ಮಹತ್ತರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಬಿಜೆಪಿಯವರು ಜಿಲ್ಲೆಯಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ಮತಗಳಾಗಿ ಪರಿವರ್ತಿಸಿರುವುದು ನಮ್ಮ ಜಿಲ್ಲೆಯ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಬಣ್ಣದ ಮಾತುಗಳಿಂದ ಬಿಜೆಪಿ ಸರಕಾರ ಕೇವಲ ಆಶ್ವಾಸನೆಗಳನ್ನು ನೀಡಿ ದೇಶದ ಮತದಾರರನ್ನು ಸೆಳೆದು ಅಧಿಕಾರಕ್ಕೆ ಬಂದಿದೆ.. ಕಳೆದ 5 ವರ್ಷಗಳಿಂದ ಎನ್ಡಿಎ ಸರಕಾರ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ನೋಟ್ಬ್ಯಾನ್ನಂತಹ ಕಾರ್ಯವನ್ನು ಮಾಡಿ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದೆ. ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಭರವಸೆ ನೀಡಿ ವಂಚಿಸಿದ್ದಾರೆ ಎಂದು ಹೇಳಿದರು.
ಪೂಜಾರಿಗಳು ನಮ್ಮ ಅಭ್ಯರ್ಥಿ ಮಿಥುನ್ ರೈ ನಾಮ ಪತ್ರ ಸಲ್ಲಿಸುವಾಗ ನಮ್ಮೊಂದಿಗಿದ್ದರು. ಮಾತ್ರವಲ್ಲ, ನಮ್ಮ ಅಭ್ಯರ್ಥಿ ಗೆಲ್ಲದಿದ್ದರೆ ತಾನು ಕುದ್ರೋಳಿ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ. ಇದು ನಮಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
ಬಿಜೆಪಿ ಮಾಡಿರುವ ಈ ಎಲ್ಲಾ ಲೋಪಗಳನ್ನು ಕಾಂಗ್ರೆಸ್ ಪಕ್ಷ ಮತದಾರರಿಗೆ ಮನವರಿಕೆ ಮಾಡಿ ಗೆಲುವು ಸಾಧಿಸಲಿದ್ದೇವೆ. ಈ ಭಾರಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಒಬ್ಬ ಯುವ ನಾಯಕನಿಗೆ ಸ್ಪರ್ಧೆಗೆ ಅವಕಾಶ ನೀಡಿದೆ. ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಾಗಲಿ, ಅಸಾಮಾಧನವಾಗಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.