ಹಿರಿಯಡ್ಕ,ಮಾ,27(AZM):ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆ ಸೇರಿದಂತೆ ಪುಟ್ಟ ಬಾಲಕಿ ನೀರುಪಾಲಾದ ಘಟನೆ ಬಜೆ ಅಣೆಕಟ್ಟೆಯ ಸ್ವರ್ಣ ನದಿ ಹಿನ್ನೀರಿನಲ್ಲಿ ಬುಧವಾರ ಸಂಜೆಯ ವೇಳೆ ನಡೆದಿದೆ.
ಮೃತಪಟ್ಟವರನ್ನು ಕೃಷ್ಣ ಎಂಬವರ ಪತ್ನಿ ಪುಷ್ಪಾ (47) ಹಾಗೂ ನೆರೆಮನೆಯ ಮಂಜುನಾಥ್ ಮತ್ತು ಸುಜಾತ ದಂಪತಿ ಪುತ್ರಿ ಅಶ್ವಿನಿ (13) ಎಂದು ಗುರುತಿಸಲಾಗಿದೆ.
ಪುಷ್ಪಾ ಎಂಬವರು ತನ್ನ ನೆರೆ ಮನೆಯ ಅಶ್ವಿನಿ ಎಂಬ ಬಾಲಕಿಯನ್ನು ಕರೆದುಕೊಂಡು ಬಜೆ ಅಣೆಕಟ್ಟೆಯ ಸ್ವರ್ಣ ನದಿ ಹಿನ್ನೀರಿನಲ್ಲಿ ಬಟ್ಟೆ ಒಗೆಯಲೆಂದು ಹೋಗಿದ್ದು, ಪುಷ್ಪ ಬಟ್ಟೆ ಒಗೆಯುತ್ತಿದ್ದ ವೇಳೆ ಅಶ್ವಿನಿ ನದಿ ನೀರಿನಲ್ಲಿ ಆಟವಾಡುತ್ತಿದ್ದಳು. ಈ ಸಂದರ್ಭ ಆಕಸ್ಮಿಕವಾಗಿ ಬಾಲಕಿ ನೀರಿನಲ್ಲಿ ಮುಳುಗಿ ಹೋಗಿದ್ದು, ಪುಷ್ಪ ರಕ್ಷಿಸಲೆಂದು ನೀರಿಗಿಳಿದ ಹಿನ್ನಲೆ ಇಬ್ಬರೂ ನೀರು ಪಾಲಾಗಿದ್ದಾರೆ. ಘಟನೆ ತಿಳಿದಂತೆ ಸ್ಥಳೀಯರು ಇಬ್ಬರನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಕೂಡಾ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.