ಕಾರ್ಕಳ,ಮಾ 27(MSP): ಸತ್ಯ ಮತ್ತು ಪ್ರಾಮಾಣಿಕತೆ ರಾಜಕರಣ ಇದ್ದಾಗ ದೇಶ ಸುಭದ್ರತೆಯಿಂದ ಇರಲು ಸಾಧ್ಯ. ಸೋಲು-ಗೆಲುವು ಯಾವುದೇ ಸ್ವರ್ಧೆಗಳ ಎರಡು ಮುಖಗಳು. ಓಟಿಗೋಸ್ಕರ ಸುಳ್ಳು ಹೇಳುವ ಅನಿವಾರ್ಯತೆ ನನಗಿಲ್ಲ. ಜನಸೇವಕರಾಗಿರುವ ಸಂಸದರು ಬೇಕೆ ಅಥವಾ ಅಪರೂಪಕ್ಕೆ ಬಂದು ಹೋಗುವ ಸಂಸದರು ನಿಮಗೆ ಬೇಕಾ ಯೋಚಿಸಿ ಎಂದು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಬುಧವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜನರ ಸೇವಕನಾಗಿ ದುಡಿಯುತ್ತೇನೆ
ಕೆಲಸ ಮಾಡುವ ಪ್ರಮೋದ್ ಬೇಕಾ... ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ ನನ್ನನ್ನು ಗೆಲ್ಲಿಸಿ ಮುಂದಿನ 5 ವರ್ಷ ಎಲ್ಲರ ಉಳಿವಿಗಾಗಿ ನಿಮ್ಮ ಸೇವಕನಾಗಿ ದುಡಿಯುತ್ತೇನೆ ಎಂದು ಮಧ್ವರಾಜ್ ಹೇಳಿದರು.
ಮೀನಿನ ವ್ಯಾಪಾರ ಬಿಟ್ಟು ಬೇರೆ ಯಾವ ಬಿಸಿನೆಸ್ ಕೂಡ ಇಲ್ಲ
ಉಡುಪಿ ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ. ಈಗಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಎಂಸ್ಯಾಂಡ್ ಬಿಸಿನೆಸ್ ಇದೆ. ಅದಕ್ಕೆ ಮರಳು ಸಿಗಲು ಬಿಡುತ್ತಿಲ್ಲ ಎಂದು ಎಲ್ಲರೂ ನನ್ನನ್ನು ದೂರುತ್ತಿದ್ದಾರೆ. ನನಗೆ ಮೀನಿನ ವ್ಯಾಪಾರ ಬಿಟ್ಟು ಬೇರೆ ಯಾವ ಬಿಸಿನೆಸ್ ಕೂಡ ಇಲ್ಲ. ಉಡುಪಿ ಜಿಲ್ಲೆಯ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ, ಕೇಂದ್ರ ಸರ್ಕಾರದ ಕಠಿಣ ಮರಳು ನೀತಿಯಿಂದ ನಮ್ಮ ಜಿಲ್ಲೆ ಸಮಸ್ಯೆಯಾಗಿದೆ, ಇದರ ಬಗ್ಗೆ ಸಂಸದರು ತುಟಿ ಚಿಚ್ಚುತ್ತಿಲ್ಲ ಎಂದು ಪ್ರಮೋದ್ ಮಧ್ವರಾಜ್ ದೂರಿದರು.
ನಾನು ಸಚಿವನಾಗಿದ್ದಾಗ ಉಡುಪಿ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿದ್ದೆ ಮುಂದೆ ಲೋಕಸಭಾ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿ ಜನಸೇವೆ ಮುಂದುವರಿಸುವೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಶೋಭಾ ಕರಂದ್ಲಾಜೆ ಮೌನ : ಹುಲಿ ಯೋಜನೆ ಜಾರಿ - ಗೋಪಾಲ ಭಂಡಾರಿ
ಕೇಂದ್ರ ಅರಣ್ಯ ಪರಿಸರ ಸಚಿವರಾದ ಪ್ರಕಾಶ್ ಜಾವಡೇಕರ್ ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ,ನಳಿನ್ ಕುಮಾರ್ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿಯಾಗಿದೆ, ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ನರೇಂದ್ರ ಮೋದಿಯ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ, ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಶೋಕದ ಕುಮಾರ್ ಕೊಡವೂರು, ಜನತಾದಳ(ಜಾ) ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ.ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಕ್ಷದ ಪ್ರಮುಖರಾದ ಎಚ್.ಶೀನಾ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಧ್ಯಕ್ಷ ಹೆಬ್ರಿ ಶ್ರೀಕಾಂತ್ ಪೂಜಾರಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಉಡುಪಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುದ್ರಾಡಿ ಸಂತೋಷ ಕುಮಾರ್ ಶೆಟ್ಟಿ ನಿರೂಪಿಸಿ ಎಚ್. ಜನಾರ್ಧನ್ ವಂದಿಸಿದರು.