ವರದಿ: ಸಿಲ್ವಿಸ್ಟರ್ ಡಿ’ಸೋಜಾ
ಕುಂದಾಪುರ,ಮಾ 27(MSP): ಗಂಡುಕಲೆಯಾಗಿದ್ದ ಯಕ್ಷಗಾನದ ಸರ್ವಾಂಗೀಣವನ್ನು ಇಂದು ಮಹಿಳೆ ಪ್ರವೇಶ ಮಾಡಿದ್ದಾಳೆ. ಯಕ್ಷ ಸಾಹಿತ್ಯದಲ್ಲಿಯೂ ಕೂಡಾ ಬೆರಳೆಣಿಕೆಯ ಮಹಿಳಾ ಸಾಹಿತಿಗಳು ಮಿಂಚುತ್ತಿದ್ದಾರೆ. ಕಲೆಯ ಕುರಿತಾದ ಆಸಕ್ತಿ, ಪ್ರತಿಭೆ, ಕಲ್ಪನಾಶಕ್ತಿ ಇವರನ್ನು ಯಶಸ್ಸಿನ ದಿಕ್ಕಿನೆಡೆ ಕೊಂಡೊಯ್ದಿದೆ. ಅಂಥಹ ಸಾಧಕರಲ್ಲಿ ಅಪರೂಪದ ಪ್ರತಿಭೆ ಶಾಂತಾ ವಾಸುದೇವ ಪೂಜಾರಿ ಅನಗಳ್ಳಿ ಒಬ್ಬರು.
ಮಹಿಳೆಯರು ಯಕ್ಷಗಾನದ ಹಿಮ್ಮೇಳ-ಮುಮ್ಮೇಳದಲ್ಲಿ ಪ್ರಭುತ್ವ ಸಾಧಿಸಿರುವುದು ಸಹಜ. ಆದರೆ ಯಕ್ಷ ಸಾಹಿತ್ಯದಲ್ಲಿ ಮಹಿಳೆಯರ ಪ್ರವೇಶ ತೀರಾ ವಿರಳ. ಆ ಹಿನ್ನೆಲೆಯಲ್ಲಿ ಸದ್ದಿಲ್ಲದೇ ಶಾಂತ ವಾಸುದೇವ ಪೂಜಾರಿ ಅವರು ಯಕ್ಷ ಸಾಹಿತ್ಯದಲ್ಲಿ ಸಾಧನೆಗೆ ಮುಂದಾಗಿದ್ದಾರೆ. ಇವರ ಕೃತಿಗಳನ್ನು ಡೇರೆ ಮೇಳೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿವೆ. ಇವರ ’ಮೇಘ ಮಂಜರಿ’ ಹಾಲಾಡಿ ಮೇಳದಲ್ಲಿ ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ. ಉತ್ತಮ ಕಥಾ ನಿರೂಪಣೆ, ಛಂದೋಬದ್ದ ಪದ್ಯಗಳು, ತಾಳಜ್ಞಾನ, ಪಾತ್ರ ಸೃಷ್ಟಿ-ಪೋಷಣೆ, ಒಟ್ಟಾರೆಯಲ್ಲಿ ಯಕ್ಷ ಸಂಪ್ರದಾಯದಲ್ಲಿ ಸಾಗುತ್ತಿದೆ ಇವರ ಪ್ರಸಂಗ ಸಾಹಿತ್ಯ. ಸ್ವಂತ ಕಥೆಯ ಜೊತೆಗೆ ಇತರ ಕಥೆಗಾರರ ಕಥೆಗೂ ಪದ್ಯ ರಚನೆ ಮಾಡಿ ರಂಗಕ್ಕೆ ನೀಡಿದ್ದಾರೆ. ಇವರ ಪದ್ಯ ರಚನೆಯ ಹಲವಾರು ಪ್ರಸಂಗಗಳು ಪ್ರೇಕ್ಷಕರನ್ನು ರಂಜಿಸಿದೆ.
ಬಾಲ್ಯದಲ್ಲಿ ಇವರ ಮಾವ ಕಲಾರಾಧಕರು. ಇವರ ಮನೆಯಲ್ಲಿ ಆಗಾಗ ಯಕ್ಷಗಾನ ನಡೆಯುತ್ತಿತ್ತು. ಕಲೆಯ ಪೂರಕ ವಾತಾವರಣದಲ್ಲಿ ಬೆಳೆದ ಇವರು ಯಕ್ಷಗಾನದ ಕುಣಿತ, ಭಾಗವತಿಕೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಸೋದರರು ಹವ್ಯಾಸ ಯಕ್ಷಗಾನ ಕಲಾವಿದರಾಗಿದ್ದು ಇವರ ಆಸಕ್ತಿ ಉತ್ತೇಜನಕ್ಕೆ ಕಾರಣವಾಯಿತು. ತಾನು ಯಕ್ಷಗಾನ ಪ್ರಸಂಗ ಬರೆಯಬೇಕು ಎನ್ನುವ ತಹತಹಕ್ಕೆ ಸ್ಪಷ್ಟ ಸ್ವರೂಪ ಇರಲಿಲ್ಲ. ಆಗ ಇವರು ಸಾಹಿತಿ ಕನರಾಡಿ ವಾದಿರಾಜ ಭಟ್ಟರಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯದ ಬಗ್ಗೆ ಕೇಳಿದಾಗ ಅವರು ಯಕ್ಷಗಾನದಲ್ಲಿ ಕಥೆಗಿಂತ ಪದ್ಯ ಮುಖ್ಯ, ಈ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವ ಸಲಹೆ ನೀಡಿದರು. ನಂತರ ಗೋಪಾಲ ಗಾಣಿಗ ಅನಗಳ್ಳಿ ಅವರು ’ಯಕ್ಷ ಛಂದಸ್ಸು’ ಎನ್ನುವ ಪುಸ್ತಕ ನೀಡಿ ಅಧ್ಯಯನ ಮಾಡುವಂತೆ ಹೇಳಿದರಂತೆ. ಯಕ್ಷ ಛಂದಸ್ಸುಗಳ ಬಗ್ಗೆ ಅಸಕ್ತಿಯಿಂದ ಅಧ್ಯಯನ ಮಾಡಿದ ನಂತರ ಇವರ ಮೇಲೆ ಪ್ರಭಾವ ಬೀರಿದ ಬಾಣಭಟ್ಟನ ಕಾದಂಬರಿಯನ್ನು ಏಕೆ ಯಕ್ಷ ಪ್ರಸಂಗ ಮಾಡಬಾರದು ಎನ್ನುವ ಪ್ರಶ್ನೆ ಮೂಡಿತು. ಅಂಥೆಯೇ ’ಅಚ್ಛೋದ ಸರಸಿ’ ಎಂಬ ಕಥೆಗೆ ಪದ್ಯ ರಚಿಸಿದರು. ಅದು 2011ರಲ್ಲಿ ಪೆರ್ಡೂರು ಮೇಳದವರು ಬೆಂಗಳೂರಿನಲ್ಲಿ ಪ್ರದರ್ಶನ ಮಾಡಿದರು.
ಮೊದಲ ಪ್ರಯತ್ನದ ಗೆಲುವು ಯಕ್ಷ ಸಾಹಿತ್ಯಕ್ಕೆ ಭರವಸೆಯಾಯಿತು. ನಂತರ ಸತತವಾಗಿ ಕಾವ್ಯ ತರಂಗಿಣಿ, ಮಧುರ ಸಿಂಚನ, ಮೇಘ ಮಂಜರಿ, ವಿಧಿ ವಂಚಿತೆ, ಶ್ರೀಕೃಷ್ಣ ಕಾರುಣ್ಯ ಹೀಗೆ ಇವರ ಸಾಮಾಜಿಕ, ಪೌರಾಣಿಕ ಪ್ರಸಂಗಳು ಪ್ರಸಿದ್ಧ ಮೇಳಗಳಲ್ಲಿ ಪ್ರದರ್ಶನಗೊಂಡಿದೆ. ಮೇಘ ಮಂಜರಿ ೨೦೧೬-೧೭ನೇ ಸಾಲಿನಲ್ಲಿ ಹಾಲಾಡಿ ಮೇಳದಲ್ಲಿ ೫೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮತ್ತೆಲ್ಲ ಪ್ರಸಂಗಗಳು ಪೆರ್ಡೂರು ಮೇಳದಲ್ಲಿಯೇ ಪ್ರದರ್ಶನ ಕಂಡಿವೆ. ’ಧರ್ಮದೇವತೆ ಚಿಕ್ಕಮ್ಮ’ ಇವರ ಪದ್ಯರಚನೆಯಲ್ಲಿ ಮೂಡಿಬಂದ ಯಶಸ್ವಿ ಕಥಾನಕ. ಈ ವರ್ಷ ಸಾಲಿಗ್ರಾಮ ಮೇಳದಲ್ಲಿ ಇವರ ಕೃತಿ ’ಕೃಷ್ಣದಾಸಿ’ ಪ್ರದರ್ಶನಗೊಳ್ಳುತ್ತಿದೆ. ಹಾಗೆಯೇ ಇವರ ಪದ್ಯರಚನೆಯ ’ಮಾತಾಂತರಂಗ’ ಸೌಕೂರು ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ.