ಮಂಗಳೂರು,ಮಾ 27(MSP): ’ಕಣ್ಣೀರು ’ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಶಕ್ತಿ, ಮತ್ತು ರಾಜಕೀಯ ಅಸ್ತ್ರ ಎಂದರೆ ತಪ್ಪಾಗಲಾರದು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಡಲ ಅಲೆಗಳ ಏರಿಳಿತದಂತೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಓಟಿನ ಬೇಟೆಗಾಗಿ ರಾಜಕೀಯದಾಟಗಳು ಏರಿಳಿತವನ್ನು ಕಾಣಲು ಪ್ರಾರಂಭಿಸಿದೆ. ಇದಕ್ಕೆ ತಾಜಾ ಉದಾಹರಣೆ ಮಿಥುನ್ ರೈ ಅವರ ಕಣ್ಣೀರಿನ ವೀಡಿಯೋ.
ಮಂಗಳೂರಿನ ಪುರಭವನದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾವೇಶದಲ್ಲಿ ಮಿಥುನ್ ರೈ ಅವರಿಗೆ ಕಣ್ಣೀರು ಹಾಕುವಂತೆ, ಕಾಂಗ್ರೆಸ್ ಸೇವಾದಳದ ಅಶ್ರಫ್ ಸೂಚಿಸಿದ್ರು ಎನ್ನುವ ವೀಡಿಯೋ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕರಾವಳಿಯಲ್ಲಿ ವೈರಲ್ ಆಗುತ್ತಿದೆ. ಈ ವಿಡೀಯೋ ತುಣುಕಿಗೆ ಸಾಕಷ್ಟು ಪರ ವಿರೋಧಗಳು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ. ಆದರೆ ಆ ವಿಡಿಯೋದ ಅಸಲಿಯತ್ತು ಇದೀಗ ಬಯಲಾಗಿದೆ. ವಿಡಿಯೋದಲ್ಲಿದ್ದ ಟೋಪಿ ಹಾಕಿದ ವ್ಯಕ್ತಿ ಅಶ್ರಫ್ ಆರಂಭದಿಂದಲೂ ಕಣ್ಣಿನ ಭಾಗದಲ್ಲಿ ಇದ್ದ ಬೆವರನ್ನು ಒರೆಸಿಕೊಳ್ತಾ ಇದ್ದದ್ದು ಸ್ಪಷ್ಟವಾಗಿ ವೀಡಿಯೋದಲ್ಲಿ ಗೋಚರಿಸಿದೆ. ಖಾದರ್ ಮಾತನಾಡುವ ಸಂದರ್ಭ ಕೂಡಾ ಅಶ್ರಫ್ ಅದೇ ರೀತಿ ಮಾಡಿದ್ಧಾರೆ. ಬೆವರು ಒರೆಸಿಕೊಂಡ ದೃಶ್ಯ ಮಿಥುನ್ ರೈ ಅವರಿಗೆ ಕಣ್ಣೀರು ಸುರಿಸುವಂತೆ ಸೂಚಿಸಿದ್ದಾರೆ ಎನ್ನುವ ಅಪಾರ್ಥದಲ್ಲಿ ವೈರಲ್ ಆಗಿದೆ.