ಬೆಂಗಳೂರು ನ 3: ನವೆಂಬರ್ ೩ರಂದು ರಾಜ್ಯದಲ್ಲಿ ಹೊರರೋಗಿಗಳ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಹೋರಾಡಿದ್ದ ಖಾಸಗಿ ವೈದ್ಯರುಗಳು ಮತ್ತೆ ಹೋರಾಟದ ಹಾದಿ ಹಿಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ನಿಯಂತ್ರಣ ಹೇರಲು ಸರಕಾರ ಜಾರಿಗೊಳಿಸಲು ತೀರ್ಮಾನಿಸಿರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ-2017ಕ್ಕೆ ಸಂಬಂಧಿಸಿದಂತೆ ನ.13ರಂದು ಬೆಳಗಾವಿ ಚಲೋ ನಡೆಸಲು ಖಾಸಗಿ ವೈದ್ಯರ ಸಂಘ ನಿರ್ಧರಿಸಿದೆ.
ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರಕಾರ ಕೆಪಿಎಂಇ ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇರೋಂದ್ರಿಂದ, ಅದಕ್ಕೂ ಮೊದಲು ಮುಖ್ಯಮಂತ್ರಿ, ಆರೋಗ್ಯ ಸಚಿವರನ್ನು ಭೇಟಿ ಮಾಡಿ ಸದನದಲ್ಲಿ ಮಸೂದೆ ಮಂಡಿಸದಂತೆ ಮನವಿ ಮಾಡಲಿದ್ದು ಇದ್ಯಾವುದಕ್ಕೂ ಮಣಿಯದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಲಿದ್ದೇವೆ ಎಂದು ಖಾಸಗಿ ವೈದ್ಯರ ಸಂಘ ತಿಳಿಸಿದೆ.
ಅಂದು ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳ 25 ಸಾವಿರಕ್ಕೂ ಅಧಿಕ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಪ್ರತಿಭಟನೆ ವೇಳೆ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂಗಳಲ್ಲಿ ಹೊರ ರೋಗಿ ವಿಭಾಗದ ಸೇವೆ ಸ್ಥಗಿತಗೊಳ್ಳಲಿದೆ. ತುರ್ತು ಸೇವೆ ಹಾಗೂ ಒಳರೋಗಿಗಳ ಸೇವೆಯಲ್ಲಿ ವ್ಯತ್ಯಯ ಇರುವುದಿಲ್ಲ. ಆ ಮೂಲಕ ರಾಜ್ಯದ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಒಂದಾಗಿ ಸರಕಾರದ ಮೇಲೆ ಒತ್ತಡ ಹೇರುವ ನಿರ್ದಾರಕ್ಕೆ ಬಂದಿದೆ. ವೈದ್ಯರ ಈ ಎಲ್ಲಾ ಒತ್ತಡಗಳಿಗೆ ಮಣಿಯದಿದ್ದರೆ ಅಂತಿಮವಾಗಿ ನ. 14ರಿಂದ ವೈದ್ಯರ ತಂಡದಿಂದ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ವೈದ್ಯರ ಸಂಘ ತಿಳಿಸಿದೆ.