ಉಡುಪಿ, ಮೇ 13 (DaijiworldNews/HR): ಮೇ10 ರಂದು ನಡೆದಿದ್ದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸ್ಟ್ರಾಂಗ್ ರೂಂನಿಂದ ಮತ ಎಣಿಕೆ ಕೇಂದ್ರದತ್ತ ಮತಯಂತ್ರಗಳು ಆಗಮಿಸಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ಶುರುವಾಗಿದೆ.
ಮಂಗಳೂರಿನಲ್ಲಿ ಸುರತ್ಕಲ್ನ ಎನ್ಐಟಿಕೆಯಲ್ಲಿ ಭಾರೀ ಭದ್ರತೆಯೊಂದಿಗೆ ಅಂಚೆ ಮತಗಳ ಎಣಿಕೆ ಶುರುವಾಗಿಲಿದ್ದು, ಉಡುಪಿಯಲ್ಲಿ ಸೈಂಟ್ ಸಿಸಿಲಿ ಶಾಲೆಯಲ್ಲಿ ಅಂಚೆ ಮತಗಳ ಎಣಿಕೆ ಪ್ರಾರಂಭವಾಗಿದೆ.
ಚುನಾವಣಾಧಿಕಾರಿಗಳ ಪಕ್ಕದಲ್ಲಿ ಅಭ್ಯರ್ಥಿ ಅಥವಾ ಅಭ್ಯರ್ಥಿ ಏಜೆಂಟ್ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಮತ ಎಣಿಕೆ ಹಾಲ್ನಲ್ಲಿ ಪ್ರತಿ ಟೇಬಲ್ನಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಯಾವುದೇ ಲೋಪದೋಷಗಳ ಮೇಲೆ ನಿಗಾ ಇಡಲು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗವು ವೀಕ್ಷಿಸಲಿದೆ.
ರಾಜಕೀಯ ನಾಯಕರು ಮತ್ತು ಏಜೆಂಟ್ಗಳಿಗೆ ಇ ಗ್ಯಾಜೆಟ್ ಅನ್ನು ನಿರ್ಬಂಧಿಸಲಾಗಿದೆ. 300 ಹೆಡ್ ಕಾನ್ಸ್ಟೆಬಲ್ಗಳು, 14 ಇನ್ಸ್ಪೆಕ್ಟರ್ಗಳು, 2 ಡಿಸಿಪಿ, 400 ಸಿವಿಲ್ ಪೊಲೀಸರು, 39 ಎಎಸ್ಐ, 200 ಗೃಹ ರಕ್ಷಕರು, ಸಿಎಆರ್ 4 ತುಕಡಿಗಳು, ಕೆಎಸ್ಆರ್ಪಿ ತುಕಡಿಗಳು ಮತ್ತು ಸಿಎಪಿಎಫ್ ತುಕಡಿಗಳನ್ನು ಮತ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾಗಿದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪ್ರತಿ ಕ್ಷೇತ್ರಗಳಲ್ಲಿ 16-18 ಸುತ್ತುಗಳ ಮತ ಎಣಿಕೆ ನಡೆಯಲಿದ್ದು, ಎಣಿಕೆ ಪ್ರಕ್ರಿಯೆಗೆ 544 ಸಿಬ್ಬಂದಿಯನ್ನು ನೇಮಿಸಲಾಗಿದೆ.