ಮಂಗಳೂರು, ಮೇ 12 (DaijiworldNews/SM): ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಎನ್ಐಟಿಕೆ ಸುರತ್ಕಲ್ನಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಅವರು ಸ್ಥಳಕ್ಕೆ ತೆರಳಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ, 18 ಟೇಬಲ್ಗಳಲ್ಲಿ ಇವಿಎಂ ಮತ ಎಣಿಕೆ ಹಾಗೂ 5 ಟೇಬಲ್ಗಳಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ, ಹೀಗೆ 8 ಕ್ಷೇತ್ರಗಳಿಗೆ ಒಟ್ಟು 112 ಇವಿಎಂ ಟೇಬಲ್ ಮತ್ತು 40 ಅಂಚೆ ಮತ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 8 ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆದು ಆರಂಭದಲ್ಲಿ ಅಂಚೆ ಮತ ಎಣಿಕೆ ಪ್ರಾರಂಭಿಸಲಾಗುವುದು, 30 ನಿಮಿಷಗಳ ಬಳಿಕ ಮತ ಯಂತ್ರಗಳ ಎಣಿಕೆ ಶುರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಗರಿಷ್ಠ 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ, ಅಂತಿಮವಾಗಿ ಸುಮಾರು 2 ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ.
ಮತ ಎಣಿಕೆ ಕೇಂದ್ರದ ಆವರಣದ 100 ಮೀ.ವ್ಯಾಪ್ತಿಯೊಳಗೆ ಅನಧಿಕೃತ ವ್ಯಕ್ತಿಗಳು, ವಾಹನಗಳ ಪ್ರವೇಶ ನಿಷೇಧಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮೂರು ಹಂತಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. 1000ಕ್ಕೂ ಅಧಿಕ ಪೊಲೀಸ್, ಅರೆಸೇನಾಪಡೆ, ಗೃಹರಕ್ಷಕರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅಲ್ಲದೆ ಸೆಕ್ಷನ್ 144 ರನ್ವಯ ಮೇ.13 ರ ಬೆಳಗ್ಗೆ 5 ರಿಂದ ಮಧ್ಯರಾತ್ರಿ 12 ರವರೆಗೆ ಜಿಲ್ಲಾದ್ಯಂತ ಸೆಕ್ಷನ್ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರತಿ ಟೇಬಲ್ ಗಳಿಗೆ ಪ್ರತ್ಯೇಕ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನೊಂದೆಡೆ ಹೊರ ಭಾಗದಲ್ಲೂ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳಾನ್ನು ಕೈಗೊಳ್ಳಲಾಗಿದೆ.