ಮಂಗಳೂರು, ಮೇ 12 (DaijiworldNews/SM) ನಾಳೆ ವಿಧಾನಸಭಾ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದಲ್ಲಿ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಸುದ್ದಿಗೋಷ್ಟಿ ನಡೆಸಿದ್ದು, ನಾಳೆಯ ಮತ ಎಣಿಕೆಯ ಕಾರ್ಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಾಳೆ ನಡೆಯಲಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಗಳನ್ನು ಹಾಕಲಾಗಿದೆ. ಪೋಸ್ಟಲ್ ಬ್ಯಾಲೆಟ್ ಗಾಗಿ 5 ಟೇಬಲ್ ಗಳನ್ನ ಮಾಡಲಾಗಿದೆ. ಎಂಟು ಕ್ಷೇತ್ರಗಳ ಇವಿಎಂಗೆ ಒಟ್ಟು 112 ಹಾಗೂ ಪೋಸ್ಟಲ್ ಬ್ಯಾಲೆಟ್ ಗೆ 40 ಟೇಬಲ್ ಹಾಕಲಾಗಿದೆ. ರಿಟರ್ನಿಂಗ್ ಆಫೀಸರ್ ಟೇಬಲ್ ಪಕ್ಕದಲ್ಲಿ ಅಭ್ಯರ್ಥಿ ಅಥವಾ ಏಜೆಂಟ್ ಕೂರ ಬಹುದು. ಬೆ.8 ಗಂಟೆಗೆ ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಆಗಲಿದೆ. 8.30ರಿಂದ ಇವಿಎಂ ಮತ ಎಣಿಕಾ ಕಾರ್ಯ ಆರಂಭ ಆಗಲಿದೆ. ಪ್ರತೀ ಕ್ಷೇತ್ರದ 19 ಟೇಬಲ್ ಗೂ ಸಿಸಿಟಿವಿ ಅಳವಡಿಸಲಾಗಿದೆ. ಇದರ ಚಿತ್ರಣವನ್ನು ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ವೀಕ್ಷಿಸಲಾಗುತ್ತದೆ. ಎಣಿಕಾ ಕೇಂದ್ರಕ್ಕೆ ಮೊಬೈಲ್ ಅಥವಾ ಯಾವುದೇ ಇಲೆಕ್ಟ್ರಾನಿಕ್ ಗ್ಯಾಜೆಟ್ಸ್ ತರಲು ಅವಕಾಶ ಇಲ್ಲ. ಏಜೆಂಟ್ ಗಳು ಅಥವಾ ಅಭ್ಯರ್ಥಿಗಳು ಏಳು ಗಂಟೆಯ ಒಳಗಡೆ ಕೌಂಟಿಂಗ್ ಹಾಲ್ ಒಳಗೆ ಇರಬೇಕು. ಎಣಿಕಾ ಸಿಬ್ಬಂದಿ ಕೂಡ 7 ಗಂಟೆ ಒಳಗೆ ಕೇಂದ್ರದ ಒಳಗೆ ಬರಬೇಕು. ಎಣಿಕಾ ಸಿಬ್ಬಂದಿ ಕೂಡ ಮೊಬೈಲ್ ತರಲು ಅವಕಾಶ ಇಲ್ಲ ಎಂದಿದ್ದಾರೆ.
ಇಡೀ ಎಣಿಕಾ ಕೇಂದ್ರವನ್ನ ಕೇಂದ್ರೀಯ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸ್ ಭದ್ರತೆಗೆ ಒಳಪಡಿಸಲಾಗಿದೆ. ಇಂದು ರಾ.12 ಗಂಟೆಯಿಂದ ನಾಳೆ ರಾ.12 ಗಂಟೆಯವರೆಗೆ ಎಣಿಕಾ ಕೇಂದ್ರದೊಳಗೆ ವಿದ್ಯುತ್ ಕಟ್ ಆಗಲ್ಲ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಾರಿ ಪೋಸ್ಟಲ್ ಬ್ಯಾಲೆಟ್ ಮತ್ತು ಇವಿಎಂ ಮತ ಎಣಿಕೆ ಒಟ್ಟಿಗೆ ನಡೆಯಲಿದೆ. ಇವಿಎಂ ಕೌಂಟ್ ಮುಗಿದರೂ ಪೋಸ್ಟಲ್ ಬ್ಯಾಲೆಟ್ ಕೌಂಟ್ ಮುಂದುವರೆಯಲಿದೆ. ಇವಿಎಂ ಸಮಸ್ಯೆ ಇದ್ದರೆ ವಿವಿಪ್ಯಾಟ್ ಮೂಲಕ ಎಣಿಕಾ ಕಾರ್ಯ ನಡೆಯಲಿದೆ. ಅಂಥಹ ತೊಂದರೆ ಬಂದಲ್ಲಿ ಕೊನೆಯ ಸುತ್ತಿನಲ್ಲಿ ನಡೆಸಲಾಗುತ್ತದೆ.
20,150 ಪೋಸ್ಟಲ್ ಬ್ಯಾಲೆಟ್ ದ.ಕ ಜಿಲ್ಲೆಯಲ್ಲಿ ಬಂದಿದೆ. ಇದು ಇಡೀ ರಾಜ್ಯದಲ್ಲೇ ಅತೀ ಹೆಚ್ಚಿನ ಪೋಸ್ಟಲ್ ಬ್ಯಾಲೆಟ್ ಆಗಿದೆ. ಒಟ್ಟು 16 ರಿಂದ 18 ಸುತ್ತುಗಳಲ್ಲಿ ಎಣಿಕಾ ಕಾರ್ಯ ಮುಕ್ತಾಯವಾಗಲಿದೆ. 544 ಸಿಬ್ಬಂದಿ ಇಡೀ ಎಣಿಕಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಒಟ್ಟು 40 ಪೋಸ್ಟಲ್ ಬ್ಯಾಲೆಟ್ ಟೇಬಲ್ ಗೆ 40 ಎಆರ್ ಓ ನೇಮಕ ಮಾಡಲಾಗಿದೆ. ಮ.1 ಗಂಟೆ ಸುಮಾರಿಗೆ ಎಣಿಕಾ ಕಾರ್ಯ ಮುಗಿಸಲು ಯೋಜಿಸಲಾಗಿದೆ. ಕೇಂದ್ರದೊಳಗೆ ಏಜೆಂಟ್, ಅಭ್ಯರ್ಥಿ, ಎಣಿಕಾ ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಮಾತ್ರ ಪ್ರವೇಶ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರವಿಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.