ಮಂಗಳೂರು, ಮೇ 12 (DaijiworldNews/MS): ರಾಜ್ಯವಿಧಾನ ಸಭೆ ಮತದಾನ ಮುಗಿದಿದ್ದು ಇನ್ನೇನಿದ್ದರೂ ಫಲಿತಾಂಶದದ್ದೇ ಕುತೂಹಲ. ಈ ಸಂದರ್ಭಗಳಲ್ಲಿ ಜ್ಯೋತಿಷಿಗಳ ಭವಿಷ್ಯದ ನುಡಿ, ಲೆಕ್ಕಾಚಾರಗಳಿಗೆ ಡಿಮ್ಯಾಂಡ್ ಇದ್ದೇ ಇರುತ್ತದೆ. ಈ ನಡುವೆ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಜ್ಯೋತಿಷಿಗಳಿಗೆ ನೇರ ಸವಾಲು ಹಾಕಿದ್ದಾರೆ.
ವಿಧಾನಸಭೆಯ ಚುನಾವಣೆಯ ಫಲಿತಾಂಶದ ನಿಖರವಾಗಿ ಭವಿಷ್ಯ ನುಡಿದು ಅವರ ಹೇಳಿಕೆ, ಲೆಕ್ಕಾಚಾರ ಸರಿಯಾದರೆ ಅಂತಹ ಜ್ಯೋತಿಷಿಗಳಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ನರೇಂದ್ರ ನಾಯಕ್ ಘೋಷಿಸಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜ್ಯೋತಿಷಿಗಳು ಅಂಚೆ ಮೂಲಕ ಫಲಿತಾಂಶದ ಉತ್ತರ ಬರೆದು ಕಳುಹಿಸಿದ್ದಾರೆ.
ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ನರೇಂದ್ರ ನಾಯಕ್ ಕಳೆದ ಮೂವತ್ತು ವರ್ಷಗಳಿಂದ ಜ್ಯೋತಿಷಿಗಳಿಗೆ ಈ ಸವಾಲನ್ನು ಹಾಕುತ್ತಲೇ ಇದ್ದಾರೆ. ಆದರೆ ಯಾವೊಬ್ಬ ಜ್ಯೋತಿಷಿಯು ಈವರೆಗೆ ಸವಾಲನ್ನು ಯಶಸ್ವಿಯಾಗಿ ಪೂರೈಸಿಲ್ಲ. ನಾನು ಕೇಳಿರುವ 20 ಪ್ರಶ್ನೆಗಳಲ್ಲಿ 19 ಪ್ರಶ್ನೆಗಳಿಗೆ ನಿಖರ ಉತ್ತರ ನೀಡಿದರೂ 10 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ.