ಮಂಗಳೂರು, ಮೇ 11 (DaijiworldNews/MS): ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಗೆ ನಿನ್ನೆ ಸಂಜೆ ಆರು ಗಂಟೆಗೆ ಮತದಾನ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದ್ದು ಇವುಗಳನ್ನು ಎನ್ಐಟಿಕೆ ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗಿದೆ.
ಇವಿಎಂ ಯಂತ್ರಗಳಿರುವ ಎನ್ಐಟಿಕೆ ಸ್ಟ್ರಾಂಗ್ ರೂಮ್ ಕೊಠಡಿಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಕಿಟಕಿ, ಬಾಗಿಲುಗಳನ್ನೂ ಮುಚ್ಚಿದ್ದಾರೆ. ಎನ್ ಐ ಟಿಕೆ ಸುತ್ತ ಪೊಲೀಸರು ಮತ್ತು ಅರೆಸೇನಾಪಡೆ ಹದ್ದಿನ ಕಣ್ಣಿರಿಸಿದ್ದಾರೆ.
ಮತ ಎಣಿಕೆಯ ದಿನ ಶನಿವಾರ ಬೆಳಿಗ್ಗೆ ಅಧಿಕಾರಿಗಳು ಅಭ್ಯರ್ಥಿಗಳ ಸಮ್ಮುಖದಲ್ಲಿ ಬಾಗಿಲಿಗೆ ಹಾಕಿದ ಸೀಲ್ ತೆರೆಯಲಿದ್ದಾರೆ.
ಇನ್ನೊಂದೆಡೆ ಮತಎಣಿಕೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 13 ರ ಬೆಳಗ್ಗೆ 5 ಗಂಟೆಯಿಂದ ಮದ್ಯರಾತ್ರಿ 12 ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈ ವೇಳೆ ಚುನಾಯಿತ ಅಭ್ಯರ್ಥಿಯ ವಿಜಯೋತ್ಸವ ಮೆರವಣಿಗೆ, ವಾಸದ ಮನೆ ಹಾಗೂ ಸಾರ್ವಜನಿಕ ಜಾಗದಲ್ಲಿ ಪಟಾಕಿ ಸಿಡಿಸುವುದು, ಸ್ಪೋಟಕ ಹಾಗೂ ಮಾರಕ ವಸ್ತುಗಳ ಸಾಗಾಟ, ಮೆರವಣಿಗೆ ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದು, ಧ್ವನಿವರ್ಧಕ, ಡಿ.ಜೆ, ಬೈಕ್ ಜಾಥಾ ನಡೆಸುವುದನ್ನು ನಿರ್ಬಂಧಿಸಲಾಗಿದೆ