ಮಂಗಳೂರು, ಮೇ 11(DaijiworldNews/MS): ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಫ್ತಿಯ ಮೂಡುಶೆಡ್ಡೆಯಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಪ್ರಚೋದನಕಾರಿ ನಡವಳಿಕೆಯೇ ಕಾರಣ ಎಂದು ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಆರೋಪಿಸಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ನಿನ್ನ ನಡೆದ ಘಟನೆಗಳ ಕುರಿತು ವಾಸ್ತವ ಸಂಗತಿಗಳನ್ನು ವಿವರಿಸಿದರು.
ಮೂಡುಶೆಡ್ಡೆ ಮತಗಟ್ಟೆಯಲ್ಲಿ ಮತದಾನ ಮುಗಿದು ಅಧಿಕಾರಿಗಳು ಮತಯಂತ್ರಗಳನ್ನು ಡಿಮಸ್ಟರಿಂಗ್ ಕೇಂದ್ರಕ್ಕೆ ಬಸ್ಗಳಲ್ಲಿ ಒಯ್ಯುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದರು. ದಿಢೀರನೆ ಅಲ್ಲಿಗೆ ಬಂದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಿಜೆಪಿ ಕಾರ್ಯಕರ್ತರು ಸೇರಿದ್ದ ಪಕ್ಷದ ಬೂತ್ ಎದುರೇ ಕಾರು ನಿಲ್ಲಿಸಿ, ಮೋದಿ ಪರ ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನಿಸಿದ್ದಲ್ಲದೆ ತಳ್ಳಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರು ಕುಳಿತಿದ್ದ ಚುನಾವಣ ಕೌಂಟರ್ ಬಳಿಗೆ ಬಂದು ಕಾರು ನಿಲ್ಲಿಸಿರುವುದು ಅವರು ಮಾಡಿದ ದೊಡ್ಡ ತಪ್ಪು ಎಂದರು.ಸಂಯಮ ವಹಿಸಿ ಕಾಂಗ್ರೆಸ್ ಪಕ್ಷದವರು ಇದ್ದಲ್ಲೇ ಕಾರು ನಿಲ್ಲಿಸಿದ್ದಲ್ಲಿ ಗಲಭೆಗೆ ಆಸ್ಪದವೇ ಇರಲಿಲ್ಲ. ದಿನವಿಡೀ ಅವರು ನೂರಾರು ಬೂತ್ಗಳಿಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿಯೂ ಬಿಜೆಪಿ ಕೌಂಟರ್ಗಳಿತ್ತು. ಅಲ್ಲಿ ಯಾಕೆ ಗಲಭೆ ನಡೆದಿಲ್ಲ ಎಂದು ಪ್ರಶ್ನಿಸಿದರು
ಸೋಲಿನ ಭೀತಿಯಿಂದ ಹತಾಶರಾದ ಕಾಂಗ್ರೆಸ್ ಅಭ್ಯರ್ಥಿ ಈ ರೀತಿ ಗಲಾಟೆ ಮಾಡಿಸಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ಕೊಡಿಸಿದ್ದಾರೆ. ಅವರ ನಡವಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೋಟ್ಯಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ, ಮೂಡುಶೆಡ್ಡೆ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಹಾಲಿ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು.