ವಿಟ್ಲ, ಮಾ 26(SM): ಪುತ್ತೂರಿನಿಂದ ಕಳವುಗೈದ ಸೊತ್ತುಗಳ ಸಹಿತ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಾಣಿ ಜಂಕ್ಷನ್ ನಲ್ಲಿ ಮಾರ್ಚ್ 26ರ ಮಂಗಳವಾರ ನಡೆದಿದೆ. ಇಲ್ಲಿನ ನಿವಾಸಿಗಳಾದ ಮುಹಮ್ಮದ್ ಸಿಹಾನ್ ಹಾಗೂ ಜೋಯ್ಸನ್ ಪೊಲೀಸರ ವಶದಲ್ಲಿರುವ ಆರೋಪಿಗಳು.
ಮಂಗಳವಾರ ಬೆಳಿಗ್ಗೆ ವಿಟ್ಲ ಠಾಣಾ ಪೊಲೀಸರು ಮಾಣಿ ಜಂಕ್ಷನ್ ನಲ್ಲಿ ಗಸ್ತು ಕರ್ತವ್ಯದಲ್ಲಿರುವ ವೇಳೆ ಇಬ್ಬರು ವ್ಯಕ್ತಿಗಳು ಗೋಣಿಚೀಲದೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದರು. ಈ ಬಗ್ಗೆ ವಿಚಾರಿಸಿದಾಗ ಇವರಿಬ್ಬರು ಸಮರ್ಪಕವಾದ ಉತ್ತರವನ್ನು ನೀಡಿಲ್ಲ.
ಬಳಿಕ ಗೋಣಿ ಚೀಲ ಪರಿಶೀಲನೆ ನಡೆಸಿದಾಗ 2 ಹಳೆಯ ಪಂಪ್ ಗಳು, ಆಟೊ ರಿಕ್ಷಾದ ಡಿಸ್ಕ್, ಪಾಲಿಥಿನ್ ಚೀಲ ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸೊತ್ತುಗಳನ್ನು ಪುತ್ತೂರು ಕಡೆಯಿಂದ ಕಳವು ಮಾಡಿ ಬಂದಿರುವುದಾಗಿ ಆರೋಪಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.