ಮೂಡುಬಿದಿರೆ, ಮೇ 10 (DaijiworldNews/SM): ಮೂಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ವ್ಯಾಪಕ ನಕಲಿ ಮತದಾನ ಮಾಡಲಾಗಿದೆ ಎಂಬ ಶಂಕೆಯೊಂದಿಗೆ ಮೂಡುಬಿದಿರೆಯ ಬಿಜೆಪಿ ಕಾರ್ಯಕರ್ತರು ಬುಧವಾರ ರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಶೀಘ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಬುಧವಾರ ನಡೆದ ಚುನಾವಣೆಯ ಸಂದರ್ಭದಲ್ಲಿ ತೋಡಾರಿನ 87ನೇ ಮತಗಟ್ಟೆಯಲ್ಲಿ ಜಾರ್ಖಂಡ್ ಮೂಲದ ಪ್ರಕಾಶ್ ರಜಕ ಎಂಬಾತ ತೋಡಾರಿನ ವ್ಯಕ್ತಿಯೋರ್ವರ ಗುರುತಿನ ಚೀಟಿಯನ್ನು ಹಿಡಿದುಕೊಂಡು ಮತಚಲಾವಣೆ ಮಾಡುವ ಸಂದರ್ಭದಲ್ಲಿ ಮತಗಟ್ಟೆಯ ಅಧಿಕಾರಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿ ಮಾತನಾಡಿ, ಇದೇ ರೀತಿ ವಾಲ್ಪಾಡಿ, ಪ್ರಾಂತ್ಯ, ಮಕ್ಕಿ ಸಹಿತ ಇತರ ಕೆಲವು ಕಡೆಗಳಲ್ಲಿ ಊರಿನಲ್ಲಿಲ್ಲದವರ ಹೆಸರಲ್ಲಿ ಕ್ಷೇತ್ರದಲ್ಲಿ ಸುಮಾರು 22ರಷ್ಟು ಮತಗಳು ಚಲಾವಣೆಯಾಗಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಹಾಗೂ ಯಾವ ಮನೆಯವರು ಗುರುತಿನ ಚೀಟಿಯನ್ನು ನೀಡಿದ್ದಾರೋ ಮತ್ತು ಇಂತಹ ಕೃತ್ಯ ನಡೆಸಲು ಕಾರಣೀಕರ್ತರಾಗಿರುವವರನ್ನು ಬಂಧಿಸಬೇಕೆಂದು ಪೊಲೀಸರಲ್ಲಿ ಆಗ್ರಹಿಸಿದ್ದಾರೆ.
ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ ಸಹಿತ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ್ದರು.