ಸುಳ್ಯ, ಮಾ 26(SM): ಗ್ರಾಮ ಪಂಚಾಯತ್ ಹಾಗೂ ಇತರ ಖಾಸಗಿ ಸಂಸ್ಥೆಗಳಲ್ಲಿ ಆರ್.ಟಿ.ಸಿ ದೊರೆಯದ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಕಚೇರಿಯಲ್ಲಿ ಆರ್.ಟಿ.ಸಿಗಾಗಿ ರೈತರ ನೂಕು ನುಗ್ಗಲು ಹೆಚ್ಚುತ್ತಿದೆ.
ಕೇಂದ್ರ ಸರಕಾರದ ಕಿಸಾನ್ ಸಮ್ಮನ್ ಯೋಜನೆಗಾಗಿ ಸಣ್ಣ ರೈತರಿಗೆ ಆರ್.ಟಿ.ಸಿ. ಅಗತ್ಯವಾಗಿದೆ. ಮೊದಲು ಆರ್.ಟಿ.ಸಿಗಳು ಗ್ರಾಮ ಪಂಚಾಯತ್ ಹಾಗೂ ಇತರ ಸೈಬರ್ ಕೇಂದ್ರದಿಂದ ಪಡೆಯಬಹುದಾಗಿತ್ತು.ಆದರೆ ಈಗ ಖಾಸಗಿಯವರಿಗೆ ಆರ್.ಟಿ.ಸಿ ಪಡೆಯವುದನ್ನು ತಡೆ ಹಿಡಿಯಲಾಗಿದೆ. ಈ ಕಾರಣದಿಂದ ಆರ್.ಟಿ.ಸಿ ಪಡೆಯಲು ರೈತರು ಸುಮಾರು ಹತ್ತಿಪ್ಪತ್ತು ಕಿ.ಮೀ. ದೂರದಿಂದ ಬೆಳಿಗ್ಗೆ 8 ಗಂಟೆಗೆ ತಾಲೂಕು ಕಚೇರಿಗೆ ಬಂದು ಕ್ಯೂ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಆರ್.ಟಿ.ಸಿ ಪಡೆಯಲು ಅಷ್ಟು ದೂರದಿಂದ ತಾಲೂಕು ಕಚೇರಿಗೆ ಬರುವುದು ತುಂಬಾ ಖರ್ಚು ತಗಲುತ್ತದೆ. ಇನ್ನೊಂದೆಡೆ ರೈತರ ಸಮಯ ವ್ಯರ್ಥವಾಗುತ್ತಿದೆ. ಇನ್ನೂ ಕೃಷಿ ಕೂಲಿ ಕಾರ್ಮಿಕರಿಗೆ ಒಂದು ದಿವಸದ ಕೂಲಿಯೂ ವ್ಯರ್ಥವಾಗುತ್ತಿದೆ. ಕೇಂದ್ರ ಸರಕಾರ ರೈತರಿಗೆ ಸೌಲಭ್ಯಗಳು ಅವರ ಮನೆಗಳಿಗೆ ಎಂದು ಹೇಳುತ್ತಿದ್ದರೆ ಇತ್ತ ರಾಜ್ಯ ಸರಕಾರ ಸುಲಭವಾಗಿ ರೈತರಿಗೆ ದೊರೆಯುತ್ತಿದ್ದ ಆರ್.ಟಿ.ಸಿ.ಗೆ ತಡೆಯುಂಟು ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ಸಂಸ್ಥೆಗಳಿಗೆ ದೊರೆಯುತ್ತಿದ್ದ ಆರ್.ಟಿ.ಸಿಗೆ ತಡೆ ಉಂಟುಮಾಡಿರುವುದನ್ನು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.