ಉಳ್ಳಾಲ, ಮೇ 10 (DaijiworldNews/MS): ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಮತದಾನ ಪ್ರಕ್ರಿಯೆ ಮುಂದುವರೆದಿದ್ದು ಮಂಗಳೂರು ( ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಇವರು ಕುಂಪಲ ಮತಗಟ್ಟೆ ಸಂಖ್ಯೆ 127 ರಲ್ಲಿ ಪತ್ನಿ ಹಾಗೂ ಮಗಳ ಜತೆಗೆ ಬಂದು ಮತ ಚಲಾಯಿಸಿದರು.
ಇನ್ನು ಬೋಳಿಯಾರ್ ಗ್ರಾಮದ ಜಾರದಗುಡ್ಡೆಯ ಮತದಾನ ಕೇಂದ್ರದಲ್ಲಿ ಶಾಸಕ ಯು.ಟಿ.ಖಾದರ್ ಅವರು ಮತದಾನ ಮಾಡಿದರು.
ಅವರು 203 ,ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 103 ಬೋಳಿಯಾರು ಜಾರದಗುಡ್ಡೆ ಶಾಲೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಜನರ ನೋವು, ಸಮಸ್ಯೆಗಳನ್ನು ಮತದಾರ ಮತಪತ್ರದ ಮೂಲಕ ವ್ಯಕ್ತಪಡಿಸಲಿದ್ದು, ಜನವಿರೋಧಿಗಳನ್ನು ಕೆಳಗಿಳಿಸುತ್ತಾರೆ. ಕ್ಷೇತ್ರದಲ್ಲಿಯೂ ಎಲ್ಲಾ ಧರ್ಮೀಯರು ಸೌಹಾರ್ದತಯುತವಾಗಿ ಮತದಾನದಲ್ಲಿ ಪಾಲ್ಗೊಂಡು ಒಗ್ಗಟ್ಟಿನಿಂದ ಈ ಬಾರಿ ಕಾಂಗ್ರೆಸ್ ಬರಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಮತ ಚಲಾಯಿಸಿದ್ದಾರೆ. 15 ದಿನಗಳ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದ ಸಮರ್ಪಿಸಿದ ಅವರು ಶಾಂತಿ, ನೆಮ್ಮದಿ ಅಭಿವೃದ್ಧಿ ಯ ರಾಜ್ಯಕ್ಕೆ ಹೆಚ್ಚಿನ ಮತದಾರರು ಬೆಂಬಲಿಸಲಿದ್ದಾರೆಯೇ ಹೊರತು
ಗಲಭೆ, ಅಶಾಂತಿ, ಅಭಿವೃದ್ಧಿಯಾಗದ ರಾಜ್ಯಕ್ಕೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಅನ್ನುವ ಭರವಸೆಯಿದೆ ಎಂದರು.
ಪುತ್ರಿಗೆ ಪ್ರಥಮ ಮತದಾನ!
ಮಾಜಿ ಸಚಿವ ಹಾಗೂ ಶಾಸಕ ಯು.ಟಿ ಖಾದರ್ ಅವರ ಏಕೈಕ ಪುತ್ರಿ ಹವ್ವಾ ನಸೀಮ ತಮ್ಮ ಮೊದಲ ಹಕ್ಕನ್ನು ಜಾರದಗುಡ್ಡೆ ಶಾಲೆಯಲ್ಲಿ ತಂದೆ, ತಾಯಿಯ ಜೊತೆಗೆ ಚಲಾಯಿಸಿದರು. ಪುತ್ರಿಯ ಪ್ರಥಮ ಹಕ್ಕು ಚಲಾಯಿಸಿದ ಕುರಿತು ತಂದೆ ಖಾದರ್ ಸಂತಸ ವ್ಯಕ್ತಪಡಿಸಿದರು.