ಬಂಟ್ವಾಳ, ಮೇ 09 (DaijiworldNews/HR): ಮತಗಟ್ಟೆ 2023 ರ ಸಾರ್ವತ್ರಿಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಮತಚಲಾವಣೆಯ ಉದ್ದೇಶದಿಂದ ಈ ಬಾರಿ ವಿಶೇಷವಾಗಿ ಮತದಾರರನ್ನು ಆಕರ್ಷಿಸಲು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 13 ಕಡೆಗಳಲ್ಲಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಹೆಚ್ಚು ಮಹಿಳಾ ಮತದಾರರಿರುವ ಮತಗಟ್ಟೆಗಳು, ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳು ಹೀಗೆ ಬೇರೆ ಬೇರೆ ಮಾನದಂಡಗಳನ್ನು ಪರಿಗಣಿಸಿ ಗ ಈ ವಿಶೇಷ ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು ಆ ಮೂಲಕ ಜನರನ್ನು ಆಕರ್ಷಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡಿದೆ.
ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ಮತಗಟ್ಟೆಗಳಲ್ಲಿ ನೂರಕ್ಕೆ ನೂರು ಮತದಾನ ಆಗಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಹಾಗಾಗಿ ಬಂಟ್ವಾಳ ಕ್ಷೇತ್ರದ 13 ಮತಗಟ್ಟೆಗಳಾದ ಪೊಳಲಿ, ಸಂಗಬೆಟ್ಟು,ನರಿಕೊಂಬು, ಕಕ್ಯೆಪದವು, ಮಾಣಿ , ಸೇರ, ನೇರಳಕಟ್ಟೆ, ಬಾಬನಕಟ್ಟೆ, ಕಲ್ಲಡ್ಕ, ಬೆಂಜನಪದವು, ಕೆದ್ದಳಿಕೆ, ಕೊಯಿಲ, ಮಜಿ ಶಾಲೆಯಲ್ಲಿ ಅಕರ್ಷಕ ದ್ವಾರ, ವರ್ಣರಂಜಿತ ಚಿತ್ತಾರ, ಕರಾವಳಿಯ ಸಂಸ್ಕೃತಿಯ ಚಿತ್ರಗಳನ್ನು ಬಿಡಿಸಲಾಗಿದೆ.
ಗೋಗ್ರೀನ್, ವಿಕಲಚೇತನ, ಸಖೀ,ನೀಲತರಂಗ, ಕಂಬಳ ಹೀಗೆ ಮತಗಟ್ಟೆಗಳಿಗೆ ವಿವಿಧ ಹೆಸರುಗಳನ್ನು ಇಡಲಾಗಿದೆ. ಇದು ಮತದಾರರನ್ನು ಆಕರ್ಷಿಸುವಲ್ಲಿ ಎಷ್ಟರಮಟ್ಟಿಗೆ ನೆರವಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.