ಮಂಗಳೂರು, ಮೇ 09 (DaijiworldNews/HR): ಮತದಾರರನ್ನು ಮತಗಟ್ಟೆಗೆ ಸೆಳೆಯಲು ಈ ಬಾರಿ ದಕ್ಷಿಣ ಕನ್ನಡದಲ್ಲಿ100 ಮಾದರಿ ಮತಗಟ್ಟೆಗಳನ್ನು ಚುನಾವಣಾ ಆಯೋಗ ಸ್ಥಾಪಿಸಿದೆ. ಮಾದರಿ ಮತಗಟ್ಟೆಗಳನ್ನು ಒಂದೊಂದು ಥೀಮ್ ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಪ್ರಮುಖವಾಗಿ ಮಾದರಿ ಮತಗಟ್ಟೆಯ ಪ್ರವೇಶದ್ವಾರದಲ್ಲಿ ಕಲಾತ್ಮಕ ಕಮಾನು ಹಾಗೂ ಆಕರ್ಷಕ ಚಿತ್ರಗಳ ಮೂಲಕ ಮತದಾರರನ್ನು ಸ್ವಾಗತಿಸುವಂತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಕ್ಷೇತ್ರಗಳಲ್ಲಿ ಒಟ್ಟು 100 ಮಾದರಿ ಮತಗಟ್ಟೆಗಳು ತಯಾರಾಗಿದೆ.
ಇನ್ನು ಆಯಾ ಹೆಸರಿನ ಪರಿಕಲ್ಪನೆಗೆ ಅನುಗುಣವಾಗಿ ಆಯಾ ಮತಗಟ್ಟೆಗಳನ್ನು ಅಲಂಕರಿಸಲಾಗಿದ್ದು, ಈ ಮೂಲಕ ಮತಗಟ್ಟೆಯಲ್ಲಿ ಹಬ್ಬದ ಕಳೆ ತುಂಬುತ್ತಿದೆ.
ಜಿಲ್ಲೆಯಲ್ಲಿ 8 ನೀಲತರಂಗ ಮತಗಟ್ಟೆ, 3 ಜನಾಂಗೀಯ, 8 ಗೋಗ್ರೀನ್, 8 ಪರಂಪರೆ, 11 ಕಂಬಳ, 3 ಪಿಡಬ್ಲ್ಯೂಡಿ, 40 ಸಖಿ, 11 ಯಕ್ಷಗಾನ, 8 ಯುವ ಮತಗಟ್ಟೆ ಸೇರಿದಂತೆ ಒಟ್ಟು 100 ಮಾದರಿ ಮತಗಟ್ಟೆಗಳು ಗಮನ ಸೆಳೆಯುತ್ತಿದೆ.
ಸಕ್ರಿಯವಾಗಿ ಮತ್ತು ಭಯಮುಕ್ತ ಸಂತಸದಾಯಕ ಮತದಾನಕ್ಕೆ ಉತ್ತೇಜನ ನೀಡುವುದು ಮಾದರಿ ಮತಗಟ್ಟೆ ಪ್ರಮುಖ ಉದ್ದೇಶವಾಗಿದೆ.