ಕುಂದಾಪುರ, ಮೇ 09 (DaijiworldNews/MS): ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಕುಂದಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್ ಪ್ರಕ್ರಿಯೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಚುನಾವಣಾಧಿಕಾರಿ, ರಶ್ಮಿ ಅವರ ನೇತೃತ್ವದಲ್ಲಿ ನಡೆಯಿತು.
ಚುನಾವಣೆಯ ಕರ್ತವ್ಯದಲ್ಲಿ ಭಾಗವಹಿಸುವ ಅಧಿಕಾರಿಗಳು ಮತಯಂತ್ರ, ಮತದಾನ ಪ್ರಕ್ರಿಯೆಗೆ ಬೇಕಾಗುವ ಎಲ್ಲ ಪರಿಕರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು. ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಮತದಾನ ಕೇಂದ್ರಕ್ಕೆ ತೆರಳಲು ಹಾಗೂ ಮರಳಿ ಬರಲು ಬಸ್ಸು 32, ಮಿನಿಬಸ್ಸು 8, ಟೆಂಪೋ ಟ್ರಾವೆಲ್ಲರ್, ಮ್ಯಾಕ್ಸಿಕ್ಯಾಬ್ ವ್ಯಾನ್ 12, ಜೀಪ್ 11 ವ್ಯವಸ್ಥೆ ಮಾಡಲಾಗಿತ್ತು.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 209592 ಮತದಾರರಿದ್ದಾರೆ. ಒಟ್ಟು 222 ಮತಗಟ್ಟೆಗಳಿವೆ. ಇದರಲ್ಲಿ 38 ನಗರ ಪ್ರದೇಶ, 184 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ.
ಮೇ 10 ಭಂಡಾಕಾರ್ಸ್ ಕಾಲೇಜಿನಲ್ಲಿ ಡಿ-ಮಸ್ಟರಿಂಗ್ ನಡೆಯಲಿದೆ. ಮತ ಎಣಿಕೆ ಮೇ 13ರಂದು ಉಡುಪಿಯ ಸೈಂಟ್ ಸಿಸಿಲಿಯಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ.