ಕುಂದಾಪುರ, ಮೇ 08 (DaijiworldNews/HR): 2022-23ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಲಹರಿ 624 ಅಂಕಗಳಿಸಿ ರಾಜ್ಯಮಟ್ಟದಲ್ಲಿ ದ್ವಿತೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ.
ಇವರು ಹೆಮ್ಮಾಡಿ ಸಮೀಪದ ಜಾಲಾಡಿ ನಿವಾಸಿ ವಾದ್ಯ ತಂಡ ನಡೆಸುತ್ತಿರುವ ಶ್ರೀಧರ್ ದೇವಾಡಿಗ ಮತ್ತು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಸಿಬ್ಬಂದಿ ಲಲಿತಾ ಎಸ್. ದೇವಾಡಿಗ ದಂಪತಿಗಳ ಪುತ್ರಿ.
ಶ್ರೀಲಹರಿ ಸಹೋದರಿ ಶ್ರೀಲಕ್ಷಾ ಬಿಎಸ್ಸಿ ಮುಗಿಸಿದ್ದಾರೆ. ತಂಗಿಗೆ ಮಾರ್ಗದರ್ಶನ ಮಾಡಿದ್ದಾರೆ. ತಂದೆ-ತಾಯಿ ಕೂಡಾ ಮಗಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಿದ್ದಾರೆ.
ಯಾವುದೇ ಟ್ಯೂಷನ್ಗೆ ಹೋಗಿಲ್ಲ. ಶಾಲೆಯಲ್ಲಿ ಶಿಕ್ಷಕವೃಂದದವರ ಮಾರ್ಗದರ್ಶನ, ಮನೆಯಲ್ಲಿ ತಂದೆ-ತಾಯಿ, ಅಕ್ಕ ತುಂಬಾ ಮಾರ್ಗದರ್ಶನ ಮಾಡುತ್ತಿದ್ದರು. ಆ ದಿನದ ಪಾಠ ಆ ದಿನವೇ ಓದುತ್ತಿದ್ದೆ. ಈಗ ಫಲಿತಾಂಶ ನೋಡಿ ತುಂಬಾ ಖುಷಿಯಾಯಿತು. ಮುಂದೆ ಸೈನ್ಸ್ ತಗೆದುಕೊಂಡು ವೈದ್ಯೆ ಆಗಬೇಕು ಎನ್ನುವ ಕನಸಿದೆ ಎನ್ನುತ್ತಾರೆ.
ಶ್ರೀಲಹರಿ ತಾಯಿ ಲಲಿತಾ ಎಸ್. ದೇವಾಡಿಗ ಮಗಳ ಸಾಧನೆಗೆ ಆಕೆಯ ಆಸಕ್ತಿ, ಶ್ರದ್ದೆಯಿಂದ ಆವತ್ತಿನ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದಳು. ನಾವು ಅವಳಿಗೆ ಪ್ರೋತ್ಸಾಹ ಕೊಡುತ್ತಿದ್ದೇವು. 625 ಅಂಕ ಬರುತ್ತದೆ ಎನ್ನುವ ನಿರೀಕ್ಷೆ ಇತ್ತು. ತುಂಬಾ ಖುಷಿಯಾಗುತ್ತಿದೆ ಎನ್ನುತ್ತಾರೆ.