ಉಡುಪಿ, ಮೇ 08 (DaijiworldNews/MS): "ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರಕಾರವಿದ್ದು, ಮತ್ತೆ ಡಬಲ್ ಇಂಜಿನ್ ಸರಕಾರ ಬರಲಿದೆ. ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲಕರ ಸ್ಥಿತಿಯಿದೆ” ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.
ಉಡುಪಿ ಮತ್ತು ಕಾಫುವಿನ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯಕ್ಕೆ ಆಗಮಿಸಿದ ಸಂಧರ್ಭದಲ್ಲಿ ಉಡುಪಿ ಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಬಂದಿದ್ದೇನೆ. ಮಂಗಳೂರು ಉಡುಪಿಯಲ್ಲಿ ಅನೇಕ ಸಭೆ ನಡೆಸಿದ್ದೇನೆ. ಮಂಗಳೂರಿನಲ್ಲಿ ಮಹಾರಾಷ್ಟ್ರ ಮೂಲದ ಅನೇಕ ಜನರಿದ್ದಾರೆ. ಬೆಂಗಳೂರಲ್ಲೂ 14 ರಿಂದ 15 ಮಹಾರಾಷ್ಟ್ರ ಮಂಡಲಗಳನ್ನು ಭೇಟಿಯಾಗಿದ್ದೇನೆ. ಕರಾವಳಿ ಭಾಗದಲ್ಲಿ ಅನೇಕ ಮಂದಿ ಮಹಾರಾಷ್ಟ್ರ ಮೂಲದ ಜನರು ನೆಲೆಸಿದ್ದಾರೆ" ಎಂದು ಹೇಳಿದರು.
"ಮೋದಿಜಿ ಅವರ ರ್ಯಾಲಿ ರೋಡ್ ಶೋ ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ. ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರಣ ಸಂಪೂರ್ಣ ಬದಲಾಗಿದೆ. ಇದು ಕೇವಲ ಕರ್ನಾಟಕ ಚುನಾವಣೆ ಅಲ್ಲ ದೇಶದ ಚುನಾವಣೆ. ಇದು ಒಂದು ರಾಜ್ಯಕ್ಕೆ ಸೀಮಿತ ಚುನಾವಣೆ ಅಲ್ಲ ಮೋದಿಜಿ ಅವರ ಚುನಾವಣೆ. ದೇಶದ ಆರ್ಥಿಕ ವ್ಯವಸ್ಥೆ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದೆ. ಪ್ರಪಂಚದ ಬೇರೆ ದೇಶಗಳ ಆರ್ಥಿಕ ಸ್ಥಿತಿ ಹದಗಟ್ಟಿದೆ. ಆದರೆ ಭಾರತದ ಆರ್ಥಿಕ ಸ್ಥಿತಿ ಸದೃಢವಾಗಿದ್ದು ಹೆಮ್ಮೆಯಿಂದ ಭಾರತದ ಹೆಸರು ಹೇಳುತ್ತಿದ್ದಾರೆ. ಜಿ.20 ಅಧ್ಯಕ್ಷತೆ ನಮ್ಮ ದೇಶಕ್ಕೆ ಸಿಕ್ಕಿರುವುದು ಗೌರವದ ವಿಚಾರ. ಪ್ರತಿಯೊಂದು ರಾಜ್ಯದವರು ಕೈ ಬಲಪಡಿಸಿದರೆ ಮಾತ್ರ ಮೋದಿಜಿ ಅವರ ಕೈ ಬಲಪಡಿಸಬಹುದು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರ ಇದ್ದಾಗ ಜನರಿಗೆ ಅನುಕೂಲವಾಗುತ್ತೆ. ನಮ್ಮ ಸರಕಾರ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತೆ ಸಹಜವಾಗಿದೆ. ಕರ್ನಾಟಕಕ್ಕೂ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿದೆ. ಕರಾವಳಿಗರಲ್ಲಿ ಅನೇಕರ ಕರ್ಮಭೂಮಿ ಮಹಾರಾಷ್ಟ್ರ ವಾಗಿದೆ. ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಸರಕಾರಗಳಿದ್ದರೆ ವಿಕಾಸಕ್ಕೆ ಹಿನ್ನಡೆಯಾಗುತ್ತೆ” ಎಂದು ಅವರು ಹೇಳಿದರು.
ಮೋದಿಯವರ ವಿರುದ್ಧ ಹೇಳಿರುವ ಹೇಳಿಕೆಗಳು, ಅವರನ್ನ ಕಾಂಗ್ರೆಸ್ ಕರೆದ ಬಗೆಯಾಗಲಿ ಸರಿಯಲ್ಲ. ಮೋದಿಯವರು ಯಾವುದೇ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ ಬದಲಾಗಿ, ಜನರು ಉತ್ತರಿಸುತ್ತಾರೆ. ಬಜರಂಗದಳವು ಒಂದು ದೇಶ ಭಕ್ತ ಸಂಘಟನೆ. ಏನಾದರೂ ವಿಪತ್ತುಗಳಾದಲ್ಲಿ,ಅವರು ತಮ್ಮ ದೇಶ ಭಕ್ತಿಯನ್ನು ತೋರಿಸುತ್ತಾರೆ.ಅಂತ ಸಂಘಟನೆಯನ್ನು ಹೇಗೆ ನಿಷೇಧ ಮಾಡಲು ಸಾಧ್ಯ?. ಭಜರಂಗಿಯ ಅವಮಾನ ಮತ್ತು ಮೋದಿಜಿಯ ಅವಮಾನಕೆ ತಕ್ಕ ಉತ್ತರ ಸಿಗುತ್ತೆ" ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕುರ್,ಮುಂಬೈ ಮೇಯರ್ ಮೀನಾಕ್ಷಿ ಶಿಂಧೆ,ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಮಟ್ಟಾರ್ ರತ್ನಾಕರ್ ಹೆಗ್ಡೆ,ದಕ್ಷಿಣ ಕನ್ನಡ, ಉಡುಪಿ ಭಾಜಪದ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ವಕ್ತಾರ ರಾಘವೇಂದ್ರ ಕಿಣಿ, ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಉಪಸ್ಥಿತರಿದ್ದರು.