ಉಡುಪಿ, ಮೇ 08 (DaijiworldNews/MS): ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪರ ಪ್ರಚಾರದ ಬೈಕ್ ರ್ಯಾಲಿ ಮತ್ತು ಕಲ್ಮಾಡಿ ಚರ್ಚ್ ಮುಂಭಾಗ ಸಮಾವೇಶವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿತ್ತು.
ಅಪಾರ ಕಾರ್ಯಕರ್ತರನ್ನೊಳಗೊಂಡ ಈ ರ್ಯಾಲಿಯನ್ನು ಪಡುತೋನ್ಸೆ ಬೇಂಗ್ರೆಯ ರಾಮ ಭಜನಾ ಮಂದಿರದಿಂದ ಬೈಕ್ ರ್ಯಾಲಿಯು ಹೊರಟು ಹೂಡೆಯಿಂದ ಗುಜ್ಜರಬೆಟ್ಟು ಮಾರ್ಗವಾಗಿ ತೊಟ್ಟಂನಿಂದ ವಡಭಾಂಡೇಶ್ವರ ಸರ್ಕಲ್ನಿಂದ ರಾಜರಸ್ತೆಯ ಮೂಲಕ ಏಳೂರು ಮೊಗವೀರ ಸಭಾಭವನದ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಬೈಕ್ ರ್ಯಾಲಿ ಮುಗಿಸಿ ನಂತರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ಪಾಲ್ಗೊಂಡರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಯುವನಾಯಕ ನಿಕೇತ್ ರಾಜ್ ಮೌರ್ಯ ಮಾತನಾಡಿ, “ತಳ ಸಮುದಾಯದ ಮಕ್ಕಳು ಉನ್ನತ ಹುದ್ದೆಯನ್ನಲಂಕರಿಸುತ್ತಿದ್ದಾರೆ ಎಂದರೆ, ಅದು ಸಂವಿಧಾನದ ಕೊಡುಗೆ. ಸಂವಿಧಾನ ಉಳಿದರೆ ಕಾಂಗ್ರೆಸ್ ಉಳಿಯುತ್ತದೆ. ಬಿಜೆಪಿ ಸರಕಾರ ಒಂದು ದಿನ ಮಲ್ಪೆ ಬಂದರನ್ನು ಅದಾನಿ, ಅಂಬಾನಿಗೆ ಮಾರುತ್ತದೆ. ಈಗಿನ ಸರಕಾರ ಕೊರೋನ ಸಂದರ್ಭದಲ್ಲೂ ಆಂಬ್ಯುಲೆನ್ಸ್ ಮೇಲೆ 14 % ತೆರಿಗೆಯನ್ನು ವಿಧಿಸಿತ್ತು. ಮೊಟ್ಟೆ, ವಿಮೆ ಎಲ್ಲದಕ್ಕೂ ತೆರಿಗೆಯನ್ನು ವಿಧಿಸಿದೆ. ಕಾಂಗ್ರೆಸ್ ಬದುಕಿನ ಬಗ್ಗೆ ಮಾತನಾಡುತ್ತಿದೆ. ಉನ್ನತ ವ್ಯಾಸಂಗ ಮಾಡಿದ ನಿರುದ್ಯೋಗಿ ಯುವಕರಿಗೆ ಸಹಕಾರಿಯಾಗಲು, ನಿರುದ್ಯೋಗಿ ಯುವಕರ ಆತ್ಮಹತ್ಯೆ ತಡೆಯಲು ಯುವನಿಧಿಯ 3000 ರೂ. ಗಳ ಗ್ಯಾರಂಟಿ ಕೊಡಲಾಗಿದೆ. ದೇಶದಲ್ಲಿ 1 ಲಕ್ಷದ 64 ಸಾವಿರ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರ್ಚೇಸಿಂಗ್ ಪವರ್ ಹೆಚ್ಚಾದರೆ ದೇಶದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ ಎಂದರ್ಥ. ಇಂದು ಅವಿದ್ಯಾವಂತರು ದೇಶವನ್ನಾಳುತ್ತಿದ್ದಾರೆ. ವಿದ್ಯಾವಂತರು ನಿರುದ್ಯೋಗಿಯಾಗಿ ಮನೆಯಲ್ಲಿದ್ದಾರೆ. 40% ಕಥೆಯನ್ನು ಅಂತ್ಯಗೊಳಿಸೋಣ.” ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ರ್ಯಾಲಿಯ ನಂತರದ ಕಲ್ಮಾಡಿ ಚರ್ಚ್ ಮುಂಬಾಗ ನಡೆಸಿದ್ದ ಸಮಾವೇಶದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್, ಕೇರಳ ಸಂಸದ ಪ್ರತಾಪನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಎನ್.ಎಸ್.ಯು.ಐ ಉಪಾಧ್ಯಕ್ಷ ಶರತ್, ಕೆಪಿಸಿಸಿ ವಕ್ತಾರೆ ವೆರೋನಿಕ ಕರೇನೇಲಿಯೋ ಮೊದಲಾದವರು ಉಪಸ್ಥಿತರಿದ್ದರು.