ಮಂಗಳೂರು, ಮೇ 07 (DaijiworldNews/SM): ರಾಜ್ಯದಲ್ಲೆಡೆ ಬಿಜೆಪಿಗೆ ಪಕ್ಷಾಂತರದ ಪರ್ವದ ಮೂಲಕ ಶಾಕ್ ಎದುರಾಗುತ್ತಿದ್ದು, ಅದರಂತೆ ಕರಾವಳಿಯಲ್ಲೂ ಶಾಕ್ ಕಾಡುತ್ತಿದೆ. ಸುದೀರ್ಘ ಕಾಲ ಆರೆಸ್ಸೆಸ್, ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಹೊಂದಿದ್ದ ಸತೀಶ್ ಪ್ರಭು ಕಮಲ ತೊರೆದು ಕೈ ಹಿಡಿದಿದ್ದಾರೆ. ಆ ಮೂಲಕ ಹಿರಿಯ ನಾಯಕನೊಬ್ಬ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಂತಾಗಿದ್ದು, ಬಿಜೆಪಿಗೆ ಹಿನ್ನಡೆಯಾದಂತಾಗಿದೆ.
ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸತೀಶ್ ಪ್ರಭು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಅವರು, ಕಳೆದ 32 ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಜನಹಿತ ಕೆಲಸಕ್ಕಾಗಿ ಭಾರತೀಯ ಜನತಾ ಪಾರ್ಟಿಯನ್ನು ಆಯ್ದುಕೊಂಡಿದ್ದೆನು. ಯಾವುದೇ ಅಧಿಕಾರಕ್ಕಾಗಿ ಪಕ್ಷದಲ್ಲಿ ಇದ್ದುದಲ್ಲ. ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಜನಹಿತ ಕಾರ್ಯ ಅಸಾಧ್ಯವೆಂದು ಮನಗಂಡಿದ್ದರಿಂದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ಪಕ್ಷವನ್ನು ದೂರಲು ಹೋಗುವುದಿಲ್ಲ. ಆದರೆ ಈಗಿನ ಬಿಜೆಪಿಯಲ್ಲಿ ಜನಹಿತ ಕೆಲಸ ಸಾಧ್ಯವಿಲ್ಲ ಎಂಬ ನಿಲುವಿನಿಂದ ಕಾಂಗ್ರೆಸ್ ಸೇರಿದ್ದೇನೆ, ಅಷ್ಟೇ ಎಂದು ಹೇಳಿದರು.
ನಾನು ಶಾಲೆಗೆ ಹೋಗುವ ಮೊದಲೇ ಆರೆಸ್ಸೆಸ್ ಶಾಖೆಗೆ ಹೋದವನು. ಸಣ್ಣಂದಿನಿಂದಲೇ ಸ್ವಯಂಸೇವಕನಾಗಿದ್ದೆ ಎಂದು ಸತೀಶ್ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ. ಜನಹಿತ ಕೆಲಸ ಮಾಡುವ ವ್ಯಕ್ತಿಯ ಜೊತೆಗೆ ನಾನಿದ್ದೇನೆ. ಮೋದಿಯವರು ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದಾಗ ನಾನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ನಮ್ಮ ಟೀಮ್ ಮೋದಿಯವರನ್ನು ಕರೆಸಿಕೊಂಡಿತ್ತು. ಜನಹಿತ ಮಾಡುವ ವ್ಯಕ್ತಿ ಯಾವುದೇ ಪಕ್ಷದಲ್ಲಿದ್ದರೂ ಅವರ ಪರವಾಗಿದ್ದೇನೆ. ಮೋದಿಯವರ ಬಗ್ಗೆ ನನ್ನ ತಕರಾರಿಲ್ಲ. ಅವರು ಕೊಟ್ಟ ಯೋಜನೆಗಳನ್ನು ಜನರಿಗೆ ತಲುಪಿಸಲು ಯೋಗ್ಯತೆ ಇರುವ, ಜನಪರ ಆಗಿರುವ ಮತ್ತು ಪ್ರಾಮಾಣಿಕ ವ್ಯಕ್ತಿ ಜನಪ್ರತಿನಿಧಿಯಾಗಬೇಕೆಂದು ನಾನು ಬಯಸುತ್ತೇನೆ ಎಂದರು.