ಉಳ್ಳಾಲ, ಮೇ 07 (DaijiworldNews/SM): ಉಳ್ಳಾಲ ಅಬ್ಬಕ್ಕ ವೃತ್ತದಿಂದ ದೇರಳಕಟ್ಟೆವರೆಗೆ ಎಸ್ಡಿಪಿಐ ಹಮ್ಮಿಕೊಂಡಿದ್ದ ರಿಕ್ಷಾ ಹಾಗೂ ಬೈಕ್ ರ್ಯಾಲಿ ವೇಳೆ ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ಸಂಭವಿಸಿದೆ.
ಕಾಂಗ್ರೆಸ್ ಕಾರ್ಯಕರ್ತ ನೌಫಾಲ್ (35) ಹಲ್ಲೆಗೊಳಗಾದವರು. ನಾಟೆಕಲ್ ಸಮೀಪ ಅಸೈಗೋಳಿಯಿಂದ ಚೆಂಬುಗುಡ್ಡೆ ಸಾರ್ವಜನಿಕ ಸಭೆಗೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಚಾರದ ವಾಹನ ಎಸ್ ಡಿಪಿಐ ಅವರ ರ್ಯಾಲಿಗೆ ನಾಟೆಕಲ್ ಸಮೀಪ ಎದುರಾಗಿತ್ತು. ಈ ಸಂದರ್ಭ ಎಸ್ ಡಿಪಿಐ ಕಾರ್ಯಕರ್ತರ ಬೈಕ್ ಹಾಗೂ ರಿಕ್ಷಾ ರ್ಯಾಲಿಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಇದೇ ಸಂದರ್ಭ ಕಾಂಗ್ರೆಸ್ ಪರವಾದ ಹಾಡನ್ನು ಚುನಾವಣಾ ಪ್ರಚಾರ ವಾಹನದಲ್ಲಿ ಹಾಕಲಾಗಿತ್ತು. ಇದನ್ನು ಎಸ್ಡಿಪಿಐ ಕಾರ್ಯಕರ್ತರು ಆಕ್ಷೇಪಿಸಿ, ನಿಲ್ಲಿಸುವಂತೆ ಸೂಚಿಸಿದ್ದರು.
ಗಣನೆಗೆ ತೆಗೆದುಕೊಳ್ಳದ ಚಾಲಕ ವಾಹನಕ್ಕೆ ಅಡ್ಡ ಇದ್ದವರಿಗೆ ಹಾರ್ನ್ ಹಾಕಲು ಆರಂಭಿಸಿದ್ದಾರೆ. ಇದರಿಂದ ಕೆರಳಿದ ಎಸ್ ಡಿಪಿಐ ಕಾರ್ಯಕರ್ತರು ಚಾಲಕ ನೌಫಾಲ್ ಕಾಲರ್ ಪಟ್ಟಿ ಹಿಡಿದೆಳೆದು ಕೆನ್ನೆಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಐಫೋನ್ ಮೊಬೈಲನ್ನು ಕಸಿದಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಗಾಯಾಳು ನೌಫಾಲ್ ನನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ದೇರಳಕಟ್ಟೆ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದು, ತದನಂತರ ಓರ್ವ ಎಸ್ ಡಿಪಿಐ ಕಾರ್ಯಕರ್ತನನ್ನು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯಿಂದ ದೇರಳಕಟ್ಟೆಯಲ್ಲಿ ನಡೆಯುತ್ತಿದ್ದ ಎಸ್ ಡಿಪಿಐ ಸಾರ್ವಜನಿಕ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಉಪ ಪೊಲೀಸ್ ಆಯುಕ್ತರುಗಳಾದ ಅಂಶು ಕುಮಾರ್ ಐಪಿಎಸ್, ಬಿ.ಪಿ ದಿನೇಶ್ ಕುಮಾರ್ , ಸಹಾಯಕ ಪೊಲೀಸ್ ಆಯುಕ್ತೆ ಧನ್ಯ ಎನ್. ನಾಯಕ್ ಹಾಗೂ ಉಳ್ಳಾಲ ಮತ್ತು ಕೊಣಾಜೆ ಠಾಣಾ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.