ಮಂಗಳೂರು, ಮೇ 07 (DaijiworldNews/SM): ಕರಾವಳಿಯಲ್ಲಿ ಇಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದಾರೆ. ಮೂಲ್ಕಿ ಮೂಡುಬಿದಿರೆ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಇನಾಯತ್ ಅಲಿ ಪರ ಪ್ರಚಾರ ನಡೆಸಲಾಯಿತು.
ಪ್ರಚಾರ ಭಾಷಣೆ ನಡೆಸಿದ ಪ್ರಿಯಾಂಕಾ ಗಾಂಧಿಯವರು, ಕರ್ನಾಟಕಕ್ಕೆ ಭ್ರಷ್ಟಾಚಾರವೇ ದೊಡ್ಡ ಆತಂಕವಾಗಿದೆ ಎಂದು ವಾಗ್ದಾಳಿ ನಡೆಸಿದರು. ಚುನಾವಣೆಯ ಸಂದರ್ಭ ದೇಶದ ಪ್ರಧಾನಿ, ಬಿಜೆಪಿ ಮುಖಂಡರು ಧರ್ಮ, ಜಾತಿ ಆತಂಕವಾದ ಬಗ್ಗೆ ಮಾತನಾಡುತ್ತಾರೆ. ಆದರೆ 40 ಪರ್ಸೆಂಟ್ ಭ್ರಷ್ಟಾಚಾರ, ರೈತರ, ನಿರುದ್ಯೋಗಿಗಳ ಕಾರ್ಮಿಕರ ಆತ್ಮಹತ್ಯೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಯಂತಹ ವಿಚಾರಗಳು ಕರ್ನಾಟಕಕ್ಕೆ ಆತಂಕವನ್ನು ತಂದೊಡ್ಡಿದೆ ಎಂದರು.
ಕರ್ನಾಟಕದಲ್ಲಿ ಪದವಿಧರ ನಿರುದ್ಯೋಗಿ ಯುವಕರಿಗೆ ಮಾಸಿಕ 2000 ರೂ., ಡಿಪ್ಲೊಮಾ ಮಾಡಿದ ನಿರುದ್ಯೋಗಿ ಗಳಿಗೆ ಮಾಸಿಕ 1500 ರೂಪಾಯಿ ನೀಡುವ ಯುವ ನಿಧಿ ಕಾರ್ಯಕ್ರಮ, ಪ್ರತಿ ಕುಟುಂಬದ ಒಡತಿಗೆ ಮಾಸಿಕ ರೂ.2000 ನೀಡುವ ಗೃಹ ಲಕ್ಷ್ಮೀ ಯೋಜನೆ, ಬಡವರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುವ ಯೋಜನೆ, ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮೊದಲಾದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಕರ್ನಾಟಕದಲ್ಲಿ ಜಾರಿಯಾಗಲಿದೆ. ತುಳು ಭಾಷೆಯನ್ನು ಎಂಟನೆ ಪರಿಚ್ಛೇದದಲ್ಲಿ ಸೇರಿಸುವ ಹಾಗೂ ಕರಾವಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.