ಉಡುಪಿ,ಮಾ 26(MSP): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಸಿದ ಕಾರಣ ಹಾಗೂ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಎಐಸಿಸಿ ಸದಸ್ಯ ಅಮೃತ್ ಶೆಣೈ ಮಾ.26 ರ ಗುರುವಾರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಅಂತಿಮ ಕ್ಷಣದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಂಡ ಅಮೃತ್ ಶೆಣೈ ಮಧ್ಯಾಹ್ನ 2.45ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರವನ್ನು ಸಲ್ಲಿಸಿದರು. ಅವರೊಂದಿಗೆ ಯಜ್ಞೇಶ್ ಆಚಾರ್ಯ, ಮನೋವೈದ್ಯ ಡಾ.ಪಿ.ವಿ. ಭಂಡಾರಿ, ಅಲೆನ್ ರೋಹನ್ ವಾಜ್, ಅನಿತಾ ಡಿಸೋಜ ಹಾಜರಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರವ ಅಮೃತ್ ಶೆಣೈ “ನಾನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಅವಕಾಶ ಸಿಗಲಿಲ್ಲ. ಆದುದರಿಂದ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವನ್ನು ವಿರೋಧಿಸಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈ ಹಿನ್ನಲೆಯಲ್ಲಿ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಈವರೆಗೆ ರಾಜೀನಾಮೆ ನೀಡಿಲ್ಲ. ಮುಂದೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದರು.
ಕಾಂಗ್ರೆಸ್ ಪಕ್ಷವೂ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಉತ್ಸಾಹದಿಂದಲೇ ಕೆಲಸ ಮಾಡುತ್ತಿದ್ದೆ. ನನ್ನನ್ನು ಎಲ್ಲರೂ ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ಗುರುತಿಸಿದ್ದರು. ಆದರೆ ನಾನು ಯಾವತ್ತು ಪಕ್ಷದ ಟಿಕೆಟ್ ಗಾಗಿ ಲಾಬಿ ನಡೆಸಲಿಲ್ಲ. ಹೈಕಮಾಂಡ್ ಮುಂದೆ ನನ್ನ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಸ್ತುತ ಸಂಸದೆಯಾಗಿರುವ ಶೋಭಾ ಕರದ್ಲಾಜೆ ವಿರುದ್ದ ಅಲೆ ಇತ್ತು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ ಇತ್ತು. ಕಾಂಗ್ರೆಸ್ ಪಕ್ಷ ಗೆಲ್ಲುವ ಎಲ್ಲಾ ಸಾಧ್ಯಗಳಿತ್ತು. ಆದರೆ ಪಕ್ಷವೂ ವಿವೇಚನೆ ಇಲ್ಲದ ನಿರ್ಧಾರವನ್ನು ಕೈಗೊಂಡಿತ್ತು. ಮೈತ್ರಿ ಪಕ್ಷ ಜೆಡಿಎಸ್ ಬಳಿ ಅಭ್ಯರ್ಥಿ ಇರಲಿಲ್ಲ ಆದರೂ ಸೀಟು ಹಂಚಿಕೆ ವೇಳೆ ಉಡುಪಿಯನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಟಿಕೆಟ್ ಪ್ರಮೋದ್ ಮಧ್ವರಾಜ್ ಗೆ ನೀಡುವುದಾದರೆ ಉಡುಪಿ ಜೆಡಿಎಸ್ ಗೆ ಯಾಕೆ ಬಿಟ್ಟು ಕೊಡಬೇಕಿತ್ತು? ಈ ಎಲ್ಲಾ ಕಾರಣಗಳಿಗೆ ಅಪ್ಪಟ್ಟ ಕಾಂಗ್ರೆಸಿಗನಾಗಿ ನನ್ನ ಮನಸ್ಸು ಒಪ್ಪಲಿಲ್ಲ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದೇನೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನೊಂದಿಗೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ. ತಾವಾಗಿಯೇ ಬಂದು ಪ್ರಚಾರ ಮಾಡಿದರೆ ಸಂತೋಷಪಡುತ್ತೇನೆ. ಆದರೆ ಯಾವ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ. ನಾಮಪತ್ರ ಸ್ವೀಕಾರದ ಬಳಿಕ ಹುರುಪಿನಿಂದ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.