ಬಂಟ್ವಾಳ, ಮೇ 06 (DaijiworldNews/HR): ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲೊರ್ವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರೀಕ್ಷೆಗೂ ಮೀರಿದ ಕೇಸರಿ ಸಾಗರದ ನಡುವೆ ಶನಿವಾರ ಸಂಜೆ ಬಿ.ಸಿ.ರೋಡಿನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚನೆಗೈದರು.
ಬಂಟ್ವಾಳಕ್ಕೆ ಸಮೀಪದ ಬಸ್ತಿಪಡ್ಪುವಿನ ವಿಶಾಲ ಮೈದಾನದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಯೋಗಿ ಅದಿತ್ಯನಾಥ್ ಅವರು ಕಾರಿನಲ್ಲಿ ರಸ್ತೆ ಮೂಲಕ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ತೆರಳಿ ಅಲ್ಲಿಂದ ತೆರೆದ ವಾಹನದಲ್ಲಿ ಬಸ್ ತಂಗುದಾಣದವರೆಗೆ ಸಾಗಿ ಬಂದರು.
ಸಿ.ಎಂ.ಯೋಗಿಯವರೊಂದಿಗೆ ತೆರದ ವಾಹನದಲ್ಲಿ ಬಂಟ್ವಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿ,ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳಿನ್ ಕುಮಾರ್ ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಜೊತೆಗಿದ್ದರು.
ಬಸ್ ತಂಗುದಾಣದ ಮುಂಭಾಗ ರಾ.ಹೆ.ಯ ಮಧ್ಯದಲ್ಲೇ ತೆರೆದ ವಾಹನದಿಂದಲೇ ಯೋಗಿ ಅದಿತ್ಯನಾಥ್ ಅವರು ಕಾರ್ಯಕರ್ತರನ್ನುದ್ದೇಶಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಮೊದಲಿಗೆ ಪೊಳಲಿ ರಾಜರಾಜೇಶ್ವರಿ ದೇವಿ,ಕಟೀಲು ದುರ್ಗಾಪರಮೇಶ್ವರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ,ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ,ಶ್ರೀ ಮಹಾಲಿಂಗೇಶ್ವರ ನಂದಾವರ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರಗಳು ಹಾಗೂ ಭಗವಾನ್ ಪರಶುರಾಮ ಭೂಮಿಯನ್ನು ಸ್ಮರಿಸಿದರಲ್ಲದೆ ಕೋಟಿ ಕೋಟಿ ನಮಸ್ಕಾರಗಳು ಎಂದು ಹೇಳಿ ಮಾತು ಮುಂದುವರಿಸಿದರು.
ಕರ್ನಾಟಕ ರಾಜ್ಯವು ಉ.ಪ್ರ.ದ ಮಾದರಿಯಲ್ಲೇ ಮುನ್ನಡೆಯಲು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು ,ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಮತ್ತೊಮ್ಮೆ ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ರಾಷ್ಟ್ರವಿರೋಧಿ ಹಾಗೂ ನಕಾರತ್ಮಕ ವಿಷಯಗಳ ಮೂಲಕ ಚುನಾವಣೆ ಎದುರಿಸುತ್ತಿದೆ.ಆದರೆ ಬಿಜೆಪಿ ಕರ್ನಾಟಕದ ಅಭಿವೃದ್ಧಿ ವಿಚಾರಧಾರೆಯೊಂದಿಗೆ ನಿಮ್ಮ ಮುಂದಿದೆ ಎಂದ ಅವರು ಭಾರತ ಪ್ರಧಾನಿ ನರೇಂದ್ರ ಮೋದಿಯುವರ ನೇತೃತ್ವದಲ್ಲಿಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು,ಅಭಿವೃದ್ಧಿ ಮತ್ತು ರಾಷ್ಟ್ರವಾದ ಗೆಲ್ಲಲು ಬಿಜೆಪಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿದೆ.ಬಜರಂಗದಳ ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಜೊತೆಗೆ ಇದೊಂದು ರಾಷ್ಟ್ರವಾದಿ ಸಂಘಟನೆಯಾಗಿದ್ದು,ಇದರ ನಿಷೇಧ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.