ಮಂಗಳೂರು, ಮೇ 6(DaijiworldNews/KH): ಕಾಮಗಾರಿ ಮುಗಿದ ನಾಲ್ಕೇ ತಿಂಗಳಲ್ಲಿ ಪದವಿನಂಗಡಿಯ ಫುಟ್ಪಾತ್ಗೆ ಅಳವಡಿಸಿದ್ದ ಇಂಟರ್ಲಾಕ್ ಹಾಳಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಅಂಡರ್ಗ್ರೌಂಡ್ ಡ್ರೈನೇಜ್ ಮತ್ತು ಫುಟ್ಪಾತ್ ನಿರ್ಮಿಸಲಾಗಿದ್ದು, ಇದರ ಇಂಟರ್ಲಾಕ್ ಮಳೆಗಾಲದಲ್ಲಿ ಖಂಡಿತವಾಗಿಯೂ ಹೊರಬರುತ್ತವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದರು.
ಸ್ಥಳೀಯ ನಿವಾಸಿ ಕಿಶೋರ್ ಮಾತನಾಡಿ, ''ಫುಟ್ ಪಾತ್ ಗಳಲ್ಲಿ ಅಳವಡಿಸಿರುವ ಇಂಟರ್ ಲಾಕ್ ಗಳು ಮುರಿದು ಹೋಗಿದ್ದರಿಂದ ಜನರು ನಡೆದಾಡುವುದಕ್ಕೆ ಭಯ ಪಡುತ್ತಾರೆ. ಈ ಬಾರಿಯ ಬಿಸಿಲಿನ ಭೇಗೆಯಿಂದ ಇಂಟರ್ ಲಾಕ್ ಗಳು ಛಿದ್ರಗೊಂಡಿದ್ದು, ಅಂಡರ್ಗ್ರೌಂಡ್ ಡ್ರೈನೇಜ್ಗೆ ಹಾಕಿರುವ ಸ್ಲ್ಯಾಬ್ನ ಗುಣಮಟ್ಟದ ಬಗ್ಗೆ ಕೂಡ ಅನುಮಾನ ಇರುವುದರಿಂದ ಜನರು ಫುಟ್ಪಾತ್ನಲ್ಲಿ ನಡೆಯಲು ಹೆದರುತ್ತಾರೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಇಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ ಇಂಟರ್ ಲಾಕ್ ಕಾಮಗಾರಿ ಮುಗಿದ ಬಳಿಕ ಅದರ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಬೇಕಿದೆ. ಆದರೆ ಬಹುತೇಕ ಇಂಜಿನಿಯರ್ ಗಳು ವಾಸ್ತವ ಕಾಮಗಾರಿ ಪರಿಶೀಲಿಸದೇ ಕಚೇರಿಯಲ್ಲೇ ಕುಳಿತು ಬಿಲ್ ಪಾಸ್ ಮಾಡುತ್ತಿದ್ದಾರೆ. ಹಾಗಾಗಿ ತೆರಿಗೆದಾರರ ಕೋಟ್ಯಾಂತರ ರೂಪಾಯಿ ಹಣ ಪೋಲಾಗುತ್ತಿದೆ.
ಸ್ಥಳೀಯ ನಿವಾಸಿ ಪ್ರಮೋದ್ ಮಾತನಾಡಿ, 'ವಾರ್ಡ್ನ ಕಾರ್ಪೊರೇಟರ್ ತಮ್ಮ ವಾರ್ಡ್ನಲ್ಲಿ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದು ಹೇಳಿ ಕೇವಲ ಬಿಲ್ ಮಾಡುವ ಉದ್ದೇಶದಿಂದ ಇಂಟರ್ಲಾಕ್ಗಳು ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು
ಎಂಸಿಸಿ ಆಯುಕ್ತ ಚನ್ನಬಸಪ್ಪ ಮಾತನಾಡಿ, ‘ಇಂಟರ್ಲಾಕ್ ಹಾಕಿದ ಕೆಲವೇ ತಿಂಗಳಲ್ಲಿ ಒಡೆದು ಹೋಗಿದೆ. ಈ ಇಂಟರ್ಲಾಕ್ ಕಾಮಗಾರಿ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.