ಉಡುಪಿ, ಮೇ 05 (DaijiworldNews/SM): ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಶುಕ್ರವಾರ ಬೃಹತ್ ಪಾದಾಯಾತ್ರೆಯ ಮೂಲಕ ಮಲ್ಪೆ ಭಾಗದಲ್ಲಿ ಮತಯಾಚನೆ ನಡೆಸಿದರು. ಮಲ್ಪೆಯ ಏಳೂರು ಮೊಗವೀರ ಸಭಾಭವನದಿಂದ ಆರಂಭವಾದ ಬೃಹತ್ ಪಾದಾಯಾತ್ರೆ ಮಲ್ಪೆ, ಕೊಳ, ವಡಂಭಾಂಡೇಶ್ವರ ಮೂಲಕವಾಗಿ ವಡಂಭಾಂಡೇಶ್ವರದ ಭಜನಾ ಮಂದಿರದ ಬಳಿ ಸಂಪನ್ನಗೊಂಡಿತು.
ಆ ಬಳಿಕ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ “ಕಾಂಗ್ರೆಸ್ ಪಕ್ಷದ ಮುಖಂಡ ಓರ್ವ ಕಾರ್ಕಳದಲ್ಲಿ ಇದು ಅಲ್ಲಾ ಮತ್ತು ರಾಮನ ನಡುವಿನ ಚುನಾವಣೆ ಎಂದಿದ್ದಾರೆ. ಕರಾವಳಿ ಕರ್ನಾಟಕ ನಮಗೆ ಗೊತ್ತಿಲ್ಲದ ಹಾಗೆ ಭಯೋತ್ಪಾದಕ ಐಸಿಸ್ ನ ಸ್ಲೀಪರ್ ಸೆಲ್ ಆಗಿದೆ. ರಘುಪತಿ ಭಟ್ ರಿಂದ ಉಡುಪಿಯಲ್ಲಿ ಬದಲಾವಣೆಯ ಹೊಸ ಶಕೆ ಪ್ರಾರಂಭವಾಯಿತು. ಇದನ್ನು ಯಶ್ ಪಾಲ್ ಸುವರ್ಣ ಮುಂದುವರೆಸಲಿದ್ದಾರೆ. ಹಿಜಾಬ್ ಹಗರಣ ಎಂಬುವುದು ಟೂಲ್ ಕಿಟ್ ಡಿಸೈನ್ ಮಾಡಿದ್ದ ಹಗರಣ, ಇದು ತನ್ನಿಂದ ತಾನಾಗಿ ಆಗಿಲ್ಲ. ಆ ಹೋರಾಟದ ಸಂಧರ್ಭದಲ್ಲಿ ನಾಯಕತ್ವ ವಹಿಸಿ ಇಡೀ ರಾಜ್ಯದಲ್ಲಿ ಭದ್ರ ಬುನಾದಿ ಹಾಕಿ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವಂತೆ ಮಾಡಿದ್ದ ಯುವಕನನ್ನು ನಮ್ಮ ಪಕ್ಷ ಅಭ್ಯರ್ಥಿಯಾಗಿ ಆರಿಸಿದೆ” ಎಂದರು.
ಉಡುಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಮಾತನಾಡಿ ‘1982 ರ ಸಂಧರ್ಭದಲ್ಲಿ ಪ್ರಥಮ ಬಾರಿಗೆ ಮೀನುಗಾರಿಕಾ ಇಲಾಖೆಗೆ ಡಿಸೇಲ್ ಸಬ್ಸಿಡಿಯನ್ನು ತಂದದ್ದು ಡಾಕ್ಟ ರ್ ವಿ ಎಸ್ ಆಚಾರ್ಯ ನವರು. ಕರಾವಳಿ ಭಾಗದ ಜನರು ಡಾಕ್ಟರ್ ವಿಎಸ್ ಆಚಾರ್ಯ ರನ್ನು ಎಂದಿಗೂ ಮರೆಯುವುದಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ ಎಂಎಲ್ ಎ ಅಭ್ಯರ್ಥಿಯಾಗಲು ಸಾಧ್ಯ ರುವುದು ಬಿಜೆಪಿಯಲ್ಲಿ ಮಾತ್ರ. ಇವತ್ತು ನನ್ನ ಬಗ್ಗೆ ಬಹಳಷ್ಟು ಟೀಕೆ ಅಪಪ್ರಚಾರಗಳು ನಡೆಯುತ್ತಿವೆ. ನಾನು ಯಾವುತ್ತೂ ಪರ ಊರಿನಲ್ಲಿ ಇದ್ದುಕೊಂಡು ಕೇವಲ ಚುನಾವಣೆ ಮತ್ತು ಸಮಾರಂಭ ಗಳಿಗೆ ಈ ಊರಿಗೆ ಬಂದವನಲ್ಲ. ನನ್ನ ಬಾಲ್ಯದಿಂದಲೂ ನಾನು ಇದೇ ಊರಿನಲ್ಲಿ ಇದ್ದವ. ಸತತ 24 ಗಂಟೆ ಈ ಬಾಗದ ಜನರ ಜೊತೆ ಇದ್ದವನು ನಾನು. ಬೇರೆಯವರ ಹಾಗೆ ಬೇರೆ ಊರಿನಲ್ಲಿ ಇದ್ದುಕೊಂಡು ಸೀಟ್ ಗಿಟ್ಟಿಸಿ ಚುನವಣೆ ಸಂಧರ್ಬದಲ್ಲಿ ಬಂದು ನಾನು ನಿಮ್ಮ ಸೇವೆ ಮಾಡುತ್ತೇನೆ ಎನ್ನುವ ನಕಲಿ ವ್ಯಕ್ತಿ ನಾನಲ್ಲ. ಈ ಹಿಂದೆ ನಿಮ್ಮೊಂದಿಗೆ ಹೇಗೆ ಇದ್ದೆಯೇ ಮುಂದೆಯೂ ನಾನು ನಿಮ್ಮ ಸೇವಕನಾಗಿ ಇರುತ್ತೇನೆ. ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ದಿಯ ಮೂಲಕ ಕನಿಷ್ಠ 10000 ಮಂದಿ ಯುವಕರಿಗೆ ಇಲ್ಲಿಯೇ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ “ಮೀನುಗಾರ ಸಮುದಾಯದವರೇ ಹೆಚ್ಚು ಇರುವ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಮೀನುಗಾರರ ಪ್ರತಿನಿಧಿಯಾಗಿ ಯಶ್ ಪಾಲ್ ಸುವರ್ಣ ಅವರಿಗೆ ಅವಕಾಶ ನೀಡಿದೆ, ನಮ್ಮ ಎದುರಾಳಿ ಪಕ್ಷದ ಅಭ್ಯರ್ಥಿ ಕೂಡಾ ಮೀನುಗಾರ ಸಮುದಾಯಕ್ಕೆ ಸೇರಿದವರು, ಆದರೆ ಅವರು ಕೇವಲ ಸಮುದಾಯಕ್ಕೆ ಮಾತ್ರ ಸೀಮಿತ, ಯಶ್ಪಾಲ್ ಸುವರ್ಣ ಮೀನುಗಾರ ರ ಜೊತೆ ನಿರಂತರವಾಗಿ ಇದ್ದವರು. ಹೀಗಾಗಿ ಮೀನುಗಾರ ಸಮುದಾಯ ಅವರನ್ನು ಈ ಬಾರಿ ಗೆಲ್ಲಿಸಬೇಕು” ಎಂದರು.
ಕಾರ್ಯಕ್ರಮದಲ್ಲಿ ಬೆಜೆಪಿ ಮುಖಂಡ ಹರಿಕೃಷ್ನ ಬಂಟ್ವಾಳ್, ಮಾಜಿ ರಕ್ಷಣಾ ಸಚಿವ ಕೆ ಆಂಟನಿ ಪುತ್ರ ಅನಿಲ್ ಆಂಟನಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಮುಖಂಡರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿ ಎನ್ ಶಂಕರ್ ಪೂಜಾರಿ, ಮಾಧ್ಯಮ ವಕ್ತಾರ ರಾಘವೇಂದ್ರ ಕಿಣಿ ಮತ್ತು ಇತರರು ಉಪಸ್ಥಿತರಿದ್ದರು,.
ಕೇಸರಿ ಶಾಲು ಧರಿಸಿದ ಸಾವಿರಾರು ಮಂದಿ ಜಯಘೋಷ ಕೂಗುತ್ತಾ ಪಾದಾಯಾತ್ರೆಯಲ್ಲಿ ಭಾಗವಹಿಸಿದರು.