ಮಂಗಳೂರು,ಮಾ 26(MSP): ದ.ಕ ಕ್ಷೇತ್ರದ ಸಂಸದ, ಪ್ರಸ್ತುತ ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಮಾ.26ರ ಮಂಗಳವಾರ ಬಿಷಪ್ ಹೌಸ್ ಗೆ ಭೇಟಿ ನೀಡಿ ಬಿಷಪ್. ಡಾ| ಪೀಟರ್ ಪೌಲ್ ಸಲ್ಡಾನ್ಹಾ ಹಾಗೂ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಪಾ| ಮಾಕ್ಸಿಂ ನೊರೊನ್ಹಾ ಅವರಿಂದ ಆಶೀರ್ವಾದ ಪಡೆದರು.
ಇದೇ ವೇಳೆ ಸಂಸದ ನಳಿನ್, ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಜಾರಿಗೆ ತಂದ ವಿವಿಧ ಯೋಜನೆಗಳ ಬಗ್ಗೆ ವಿವರಿಸಿ, ತಮ್ಮ ಗೆಲುವಿಗಾಗಿ ಬಿಷಪ್ ಅವರ ಬೆಂಬಲವನ್ನು ಯಾಚಿಸಿದರು.
ಆ ಬಳಿಕ ಸಂಸದ ನಳಿನ್ ಅವರನ್ನು ಅಶೀರ್ವಾದಿಸಿದ ಬಿಷಪ್, 'ಕೇಂದ್ರ ಸರ್ಕಾರವು ಆಪ್ರಿಕಾದ ಖಂಡದ ಕೆಲ ಬಡ ದೇಶದ ಪ್ರದೇಶಗಳನ್ನು ದತ್ತು ತೆಗೆದುಕೊಂಡು ಮಾನವೀಯ ನೆಲೆಯಲ್ಲಿ ಆಹಾರ, ವಿದ್ಯಾಭ್ಯಾಸ ಹಾಗೂ ಆರೋಗ್ಯ ಸಂಬಂಧಿಸಿದ ಮೂಲಭೂತ ಯೋಜನೆಯನ್ನು ಅಭಿವೃದ್ಧಿಪಡಿಸಬೇಕು' ಎಂದು ಸಲಹೆ ನೀಡಿದರು.
ಬಿಷಪ್ ಹೌಸ್ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, "ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಬಿಷಪ್ ಅವರನ್ನು ಭೇಟಿಯಾಗಿ ಮನಸ್ಸಿಗೆ ಸಂತಸ ನೀಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ, ಗೆಲುವು ಸಾಧಿಸಲು ಬಿಷಪ್ ಅವರ ಅಶೀರ್ವಾದವು ವಿಶೇಷ ಸ್ಪೂರ್ತಿ ನೀಡಿದೆ " ಎಂದು ವಿವರಿಸಿದರು.
ಬಿಷಪ್ ಹೌಸ್ ಗೆ ಭೇಟಿ ವೇಳೆ ನಳಿನ್ ಅವರೊಂದಿಗೆ, ಶಾಸಕ ವೇದವ್ಯಾಸ್ ಕಾಮತ್ , ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ಗ್ಲಾಡ್ವಿನ್ ಡಿ’ಸಿಲ್ವಾ, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.