ಬೆಳ್ತಂಗಡಿ, ಮೇ 05 (DaijiworldNews/HR): ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಮುಖಂಡ ಸತ್ಯಜಿತ್ ಸುರತ್ಕಲ್ ಅವರನ್ನು ಬೆಳ್ತಂಗಡಿ ಶಾಸಕರು ಹಾಗೂ ಇವರ ಬೆಂಬಲಿಗರು ತೇಜೋವಧೆ ಮಾಡುತ್ತಿದ್ದು ಇದು ಮುಂದುವರಿದರೆ ಸೂಕ್ತ ಕಾನೂನು ಕ್ರಮಗಳ ಉತ್ತರದ ಜತೆ ಬಿಲ್ಲವ ಸಮಾಜದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಎಚ್ಚರಿಕೆಯನ್ನು ನೀಡಿವೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಗಳ ಪರವಾಗಿ ಯುವವವಾಹಿನಿ ಕೇಂದ್ರ ಸಮಿತಿ ಕೋಶಾಧಿಕಾರಿ ಪ್ರಸಾದ್ ಎಂ.ಕೆ. ಮಾತನಾಡಿ, ಶಾಸಕ ಹರೀಶ್ ಪೂಂಜಾರು ಕಳೆದ 5 ವರ್ಷಗಳಿಂದ ಅನೇಕ ರೀತಿಯಲ್ಲಿ ಬಿಲ್ಲವ ಸಮಾಜವನ್ನು ತುಳಿಯುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಪ್ರಕಾಶ್ ಕೋಟ್ಯಾನ್' ಎನ್ನುವ ನಕಲಿ ಹೆಸರಿನ ಫೇಸ್ಬುಕ್ ಖಾತೆಯಿಂದ ಸತ್ಯಜಿತ್ ಸುರತ್ಕಲ್ ರನ್ನು ಕೀಳು ಮಟ್ಟದ ಶಬ್ದಗಳಿಂದ, ಏಕವಚನದಿಂದ ನಿಂದಿಸಿ ತೇಜೋವಧೆ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಈ ನಕಲಿ ಖಾತೆಯ ಕವರ್ ಫೋಟೋದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ರ ಭಾವಚಿತ್ರ ಇದ್ದು ಈ ಖಾತೆಯಿಂದ ಹಲವು ಬಾರಿ ನಮ್ಮ ಸಮಾಜದ ಮುಖಂಡರನ್ನು ಅವಹೇಳನ ಮಾಡಿ ಬಿಲ್ಲವ ಸಮಾಜ ಮತ್ತು ಧಮನಿತ ಸಮಾಜದ ಮಧ್ಯೆ ಗೊಂದಲವನ್ನು ಮೂಡಿಸುತ್ತಿದ್ದಾರೆ.
ಸತ್ಯಜಿತ್ ಸುರತ್ಕಲ್ ಬೆಳ್ತಂಗಡಿ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಪರವಾಗಿ ಅಥವಾ ವ್ಯಕ್ತಿಯ ಪರವಾಗಿ ಮತಯಾಚನೆ ಮಾಡಿರುವುದಿಲ್ಲ. ಬದಲಾಗಿ ನಾರಾಯಣಗುರು ವಿಚಾರ ವೇದಿಕೆ ಯ ರಾಜ್ಯಾಧ್ಯಕ್ಷರಾಗಿ ಬಿಲ್ಲವ ಸಮಾಜದ ಕೋರಿಕೆಯ ಮೇರೆಗೆ ಮಾತ್ರ ಮತ ಯಾಚನೆ ಮಾಡಿರುವುದು ಸ್ಪಷ್ಟ. ಇತರ ಕ್ಷೇತ್ರದಲ್ಲಿ ಸಮಾಜದ ವ್ಯಕ್ತಿಗಳ ಕೋರಿಕೆ ಇದ್ದಲ್ಲಿ ಅವರ ಪರವಾಗಿ ಮತ ಯಾಚಿಸಲು ಅವರು ಬದ್ಧರಾಗಿದ್ದಾರೆ. ಸತ್ಯಜಿತ್ ಸುರತ್ಕಲ್ ಈಗ ಸ್ವತಂತ್ರರಾಗಿದ್ದು, ಯಾವುದೇ ಪಕ್ಷದಲ್ಲಾಗಲೀ ಹಿಂದೂ ಸಂಘಟನೆಯಲ್ಲಾಗಲಿ ಜನಾಬ್ಯಾರಿಯಿಲ್ಲ. ಪ್ರಸ್ತುತ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜಾಧ್ಯಕ್ಷರಾಗಿ ಜವಾಬ್ದಾರಿಯನ್ನು ತೆಗೆದುಕೊಂಡು ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾ ಇದ್ದಾರೆ. ಬಿಲ್ಲವ ಸಮಾಜದ ಅಭ್ಯರ್ಥಿಯ ಪರವಾಗಿ ಬಿಲ್ಲವ ಸಂಘಟನೆಗಳ ಜೊತೆಗೂಡಿ ಬಿಲ್ಲವ ಪ್ರಮುಖರ ಮನೆಗೆ ಭೇಟಿ ನೀಡಿ ಬಿಲ್ಲವ ಸಮಾಜವನ್ನು ಗೆಲ್ಲಿಸಿಕೊಡುವ ಬಗ್ಗೆ ಮಾತುಕತೆಯನ್ನು ಮಾಡಿರುತ್ತಾರೆ . ಅದನ್ನು ಬಿಟ್ಟು ಪಕ್ಷದ ಬಗ್ಗೆ ಮಾತನಾಡಿಲ್ಲ, ಪಕ್ಷದಲ್ಲಿ ಗುರುತಿಸಿಕೊಂಡವರ ಜೊತೆ ಪ್ರಚಾರಕ್ಕೆ ಹೋಗಿರುವುದಿಲ್ಲ. ಸಮಾಜದ ಜೊತೆ ಸಮಾಜದ ಪ್ರಮುಖರ ಮನೆ ಮನೆಯ ಭೇಟಿ ಕಾರ್ಯವನ್ನು ಪಕ್ಷಾತೀತವಾಗಿ ಈ ಚುನಾವಣೆಯಲ್ಲಿ ಮಾಡುತ್ತಿದ್ದಾರೆಯೇ ಹೊರತು ಯಾವುದೇ ರಾಜಕೀಯ ಪಕ್ಷದ ಪರವಾಗಿ ಹೋಗುತ್ತಾ ಇಲ್ಲವೆಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಶಾಸಕ ಹರೀಶ್ ಪೂಂಜಾರು ಬಿಲ್ಲವ ಸಮಾಜದ ಅರಣ್ಯಾಧಿಕಾರಿ ಸಂಧ್ಯಾರನ್ನು ದುರುದ್ದೇಶ ಪೂರ್ವಕವಾಗಿ ದೂರದ ಜಿಲ್ಲೆಗೆ ವರ್ಗಾವಣೆ ಮಾಡಿರುವುದು, ತಾಲ್ಲೂಕಿನಲ್ಲಿ ಹಲವು ನಿಂತು ಹೋಗಿರುವ ಕಂಬಳವನ್ನು ಆರಂಭಿಸುವ ಅವಕಾಶ ಇದ್ದರೂ ವೇಣೂರು ಪೆರ್ಮುಡ ಕಂಬಳ ಸಮಿತಿಯು ಗೌರವಾಧ್ಯಕ್ಷ ಕೆ. ವಸಂತ ಬಂಗೇರ ಹಾಗೂ ನಿತೀಶ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಮೂಗು ತೂರಿಸಿ ಇನ್ನೊಂದು ಸಮಿತಿಯನ್ನು ರಚನೆ ಮಾಡಿ ಆ ಮೂಲಕ ಕಂಬಳವನ್ನು ಹೈಜಕ್ ಮಾಡುವ ವಿಫಲ ಪ್ರಯತ್ನ ಮಾಡಿರುವುದು, ನಾರಾಯಣ ಗುರುಗಳ ಟ್ಯಾಬ್ಲೊ ನಿರಾಕರಣೆ ಸಂದರ್ಭದಲ್ಲಿ ಹಾಗೂ ಪಠ್ಯ ಪುಸ್ತಕ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆಯನ್ನು ನೀಡದಿರುವುದು, ಸಮಾಜವನ್ನು ನಿಂದಿಸಿ ಕೋಟಿ-ಚೆನ್ನಯ್ಯರ ಬಗ್ಗೆ ಅವಹೇಳನ ಮಾಡಿದ ಜಗದೀಶ್ ಅಧಿಕಾರಿಯವರನ್ನು ಕಾರ್ಯಕ್ರಮದ ಅತಿಥಿಯಾಗಿ ಆಹ್ವಾನಿಸಿ ಗೌರವವನ್ನು ನೀಡಿರುವುದು, ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ನಾರಾಯಣ ಗುರುಗಳ ಅವಮಾನಿಸಿದ ಬಿಲ್ಲವ ಸಮಾಜ ವಿರೋಧದ ಮಧ್ಯೆಯೂ ರೋಹಿತ್ ಚಕ್ರತೀರ್ಥ ನನ್ನು ವೇಣೂರು ಬ್ರಹ್ಮಕಳಶಕ್ಕೆ ಆಹ್ವಾನಿಸಿರುವುದು, ಉಪ್ಪಿನಂಗಡಿ ಕೊಣಾಲು ದೈವಸ್ಥಾನದಲ್ಲಿ ಬಿಲ್ಲವರಿಗೆ ಪ್ರವೇಶವನ್ನು ನೀಡದಿದ್ದಾಗ ಶಾಸಕರಾಗಿ ಯಾವುದೇ ಸಹಕಾರ ನೀಡದಿರುವುದು, ಪಕ್ಷದ ಹೆಸರಿನಲ್ಲಿ ಬಿಲ್ಲವರನ್ನು ಎತ್ತಿಕಟ್ಟಿ ಪ್ರತ್ಯೇಕ ಸಂಘಟನೆಯನ್ನು ರಚಿಸಿ ಬಿಲ್ಲವರನ್ನೇ ವಿಂಗಡಿಸಿ ಗೊಂದಲದ ವಾತಾವರಣವನ್ನು ನಿರ್ಮಿಸುತ್ತಿರುವುದು ಎಲ್ಲರೂ ಗಮನಿಸುತ್ತಿದ್ದಾರೆ. ಶಾಸಕರು ಮತ್ತು ಅವರ ಹಿಂಬಾಲಕರು ಬಿಲ್ಲವ ಸಮಾಜವನ್ನು ತುಳಿಯುತ್ತಿರುವ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಯುವಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್, ಕಾರ್ಯದರ್ಶಿ ಸುನೀಲ್ ಕನ್ಯಾಡಿ, ಸಂಘಟನಾ ಕಾರ್ಯದರ್ಶಿ ಮಾದವ ಪೂಜಾರಿ ಇದ್ದರು.